ವಿಧಾನಸಭೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಅಕ್ರಮದಿಂದನಾ: ಬಿವೈ ವಿಜಯೇಂದ್ರ

Krishnaveni K

ಶುಕ್ರವಾರ, 25 ಜುಲೈ 2025 (14:04 IST)
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಮೂಲಕ ರಾಹುಲ್ ಗಾಂಧಿಯವರು ಚುನಾವಣಾ ಆಯೋಗದ ಮೇಲೆ ಆರೋಪ ಮಾಡಿದ್ದಾರೆ. ಹಾಗಿದ್ದರೆ ಕಾಂಗ್ರೆಸ್ ನವರು ವಿಧಾನಸಭೆ ಗೆದ್ದಿದ್ದು ಹೇಗೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವ್ಯಂಗ್ಯ ಮಾಡಿದ್ದಾರೆ.

ರಾಹುಲ್ ಗಾಂಧಿ ಮಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡ ಧ್ವನಿಗೂಡಿಸಿದ್ದಾರೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಇಟ್ಟರು ಎಂಬ ಗಾದೆ ಮಾತಿದೆ. ಹಾಗಾಗಿದೆ ಇವತ್ತು ಕಾಂಗ್ರೆಸ್ ಪರಿಸ್ಥಿತಿ ಎಂದು ವಿಜಯೇಂದ್ರ ಅವರು ಟೀಕಿಸಿದರು.

ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆ. ರಾಹುಲ್ ಗಾಂಧಿ ಮತ್ತಿತರರು ಇಂಥ ಸಾಂವಿಧಾನಿಕ ಸಂಸ್ಥೆ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಆ ಚುನಾವಣಾ ಆಯೋಗದ ಅಪಮಾನ ಮಾತ್ರವಲ್ಲ; ಪ್ರಜಾಪ್ರಭುತ್ವ ವಿರೋಧಿ ನಡೆಯೂ ಹೌದು ಎಂದು ಆಕ್ಷೇಪಿಸಿದರು. ಡಿ.ಕೆ.ಶಿವಕುಮಾರ್ ಅವರು ತಮ್ಮ ಸೋದರ ಡಿ.ಕೆ.ಸುರೇಶ್ ಅವರು ಇದೇ ಅಕ್ರಮದಿಂದ ಸೋತಿದ್ದಾಗಿ ಹೇಳಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಚುನಾವಣಾ ಅಕ್ರಮ ನಡೆದಿದ್ದರೆ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ 136 ಶಾಸಕರ ಬಲದೊಂದಿಗೆ ಯಾಕೆ ಅಧಿಕಾರಕ್ಕೆ ಬರುತ್ತಿತ್ತು ಎಂದು ಕೇಳಿದರು.

ಕೇಂದ್ರ ಸರಕಾರ, ನರೇಂದ್ರ ಮೋದಿಜೀ, ಬಿಜೆಪಿ ಸೇರಿ ಚುನಾವಣಾ ಆಯೋಗದ ದುರ್ಬಳಕೆ ಮಾಡಿದ್ದಿದ್ದರೆ ನೀವು ಮುಖ್ಯಮಂತ್ರಿಯಾಗಲು ಸಾಧ್ಯವಿತ್ತೇ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು. ಡಿ.ಕೆ.ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿ ಇವತ್ತು ರಾಜ್ಯದಲ್ಲಿ ಅಲೆದಾಡುತ್ತಿಲ್ಲವೇ? ಈಚೆಗೆ 3 ಉಪ ಚುನಾವಣೆಯಲ್ಲೂ ಗೆದ್ದ್ದರಲ್ಲವೇ? ಆಗ ಚುನಾವಣಾ ಆಯೋಗದಿಂದ ದುರ್ಬಳಕೆ ಆಗಿಲ್ಲವೇ ಎಂದು ಕೇಳಿದರು.

ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಅಪಾಯಕಾರಿ ಬೆಳವಣಿಗೆ. ಕಾಂಗ್ರೆಸ್ ನಾಯಕರ ತುರ್ತು ಪರಿಸ್ಥಿತಿಯ ಮನಸ್ಥಿತಿ ಇಂದಿಗೂ ಬದಲಾಗಿಲ್ಲ ಎಂಬುದಕ್ಕೆ ಮತ್ತೊಂದು ನಿದರ್ಶನವಿದು ಎಂದರಲ್ಲದೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ನಾಡಿನ ಜನರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಈಗಾಗಲೇ ಚರ್ಚೆ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಹೇಳಿಕೆ ಕೊಡುವುದಾದರೆ ಸುಪ್ರೀಂ ಕೋರ್ಟಿನಲ್ಲಿ ತಿಳಿಸಲಿ. ಚುನಾವಣಾ ಆಯೋಗವನ್ನು ಪ್ರಶ್ನಿಸುವುದು, ಅನುಮಾನದಿಂದ ನೋಡುವುದು ಇವರಿಗೆ ಶೋಭೆ ತರುವುದಿಲ್ಲ ಎಂದು ನುಡಿದರು.

ಕರ್ನಾಟಕದ ಹಿತಾಸಕ್ತಿ ಬಲಿ ಕೊಡಲು ಅವಕಾಶ ಕೊಡುವುದಿಲ್ಲ
ಮಹದಾಯಿ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಮಹದಾಯಿ ವಿಚಾರದಲ್ಲಿ ರಾಜಾರೋಷವಾಗಿ ಹೇಳಿಕೆ ನೀಡಿದ್ದಾರೆ. ಮಹದಾಯಿ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ರಾಜ್ಯದೊಂದಿಗೆ ಸದಾ ಇರುತ್ತದೆÉ. ಗೋವಾ ಮುಖ್ಯಮಂತ್ರಿ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಕೇಂದ್ರದ ಸಚಿವ ಪ್ರಲ್ಹಾದ್ ಜೋಶಿಯವರ ಹೇಳಿಕೆಯನ್ನೂ ತಾವು ಗಮನಿಸಬೇಕು. ಕರ್ನಾಟಕದ ಹಿತಾಸಕ್ತಿ ಬಲಿ ಕೊಡಲು ನಾವು ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ