ಬೆಂಗಳೂರು ಕಂಬಳಕ್ಕೆ 1 ಕೋಟಿ ಸಹಾಯಧನ
ರಾಜಧಾನಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಕಂಬಳ ಓಟದ ಸ್ಪರ್ಧೆಗೆ ಅಗತ್ಯ ಸಹಾಯಧನ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಬುಧವಾರ 'ಬೆಂಗಳೂರು ಕಂಬಳ- ನಮ್ಮ ಕಂಬಳದ ಕರೆಪೂಜೆ ನೆರವೇರಿಸಿ ಮಾತನಾಡಿದ ಅವರು ನಾಡಿನ ಹೆಮ್ಮೆಯ ಇತಿಹಾಸ, ದೇಶೀಯ ಹಾಗೂ ಐತಿಹಾಸಿಕವಾದ ಕಂಬಳಕ್ಕೆ ಹೆಚ್ಚಿನ ಸಹಕಾರ ನೀಡಲಾಗುವುದು. 20 ಕಂಬಳಗಳಿಗೆ ತಲಾ 5 ಲಕ್ಷ ರು.ನಂತೆ 1 ಕೋಟಿ ಸಹಾಯಧನ ನೀಡಲಾಗುವುದು. ಈ ವಿಚಾರವಾಗಿ ಮುಖ್ಯಮಂತ್ರಿಗಳು ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಜತೆ ಚರ್ಚೆ ನಡೆಸಲಾಗುವುದು' ಎಂದು ಹೇಳಿದರು. ನಮ್ಮ ಸಂಸ್ಕೃತಿಯೇ ಈ ದೇಶದ ದೊಡ್ಡ ಆಸ್ತಿ. ದಕ್ಷಿಣ ಕನ್ನಡ ಜಿಲ್ಲೆ ಶ್ರೀಮಂತ ಜನಪದ ಆಚರಣೆಗಳನ್ನು ಹೊಂದಿದೆ. ಕಂಬಳ ಈ ಬಾರಿ ಬೆಂಗಳೂರಿನಲ್ಲಿ ನಡೆಯುವ ಕಾರಣ ಎರಡೂ ಜಿಲ್ಲೆಗಳ ಯುವಕರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಈ ಐತಿಹಾಸಿಕ ಕಂಬಳ ಆಯೋಜನೆ ಮಾಡುತ್ತಿರುವುದಕ್ಕೆ ನಮ್ಮ ಸಹಕಾರ ಎಂದಿಗೂ ಇರುತ್ತದೆ. ದೇವರು ವರ, ಶಾಪ ಎರಡೂ ನೀಡದೆ ಅವಕಾಶ ನೀಡುತ್ತಾನೆ. ಈ ಅವಕಾಶ ಬಳಸಿಕೊಳ್ಳಿ ಎಂದು ತಿಳಿಸಿದರು.