ವಿದ್ಯಾರ್ಥಿಗಳ ಕಪಿಚೇಷ್ಟೆಗೆ 11 ಗುಡಿಸಲುಗಳು ಭಸ್ಮ

ಶುಕ್ರವಾರ, 18 ಜನವರಿ 2019 (17:19 IST)
ಸಿಗರೇಟು ಸೇದಲು ಬಂದವರು 15 ಗುಡಿಸಲುಗಳಿಗೆ ಬೆಂಕಿ ಇಟ್ಟಿದ್ದು, ಅದರಲ್ಲಿ 11 ಗುಡಿಸಲುಗಳು ಸುಟ್ಟು ಭಸ್ಮವಾಗಿ ಬಡಜನರ ಬದುಕು ಬೀದಿಗೆ ಬಿದ್ದ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಅರಸೀಕೆರೆ ಮಾಲೇಕಲ್ಲು ತಿರುಪತಿಯಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಬೆಟ್ಟದ ರಸ್ತೆಯಲ್ಲಿ ಗುಡಿಸಲುಗಳಿಗೆ ಹತ್ತಿಕೊಂಡ ಬೆಂಕಿಯು ಬಡಜನರ ಬದುಕನ್ನು ಕಿತ್ತುಕೊಂಡಿದೆ. 15 ಗುಡಿಸಲುಗಳಲ್ಲಿ, 11 ಗುಡಿಸಲುಗಳು ಬೆಂಕಿಯಿಂದಾಗಿ ಸಂಪೂರ್ಣ ಭಸ್ಮವಾಗಿವೆ.

ಸ್ವಂತ ಜಾಗ ಮನೆ ಇಲ್ಲದೆ, ಗುಡಿಸಲು ಕಟ್ಡಿಕೊಂಡು ವಾಸವಿದ್ದ ಬಡವರು ಮುಂದೇನು ಎಂದು ಚಿಂತಾಕ್ರಾಂತರಾಗಿದ್ದಾರೆ.
ಗುಡಿಸಲಿನಲ್ಲಿ ಇದ್ದ ಸಾಮಾನು ಸರಂಜಾಮು, ಪಾತ್ರೆ ಸೇರಿ ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಗುಡಿಸಲುಗಳ ಹತ್ತಿರದಲ್ಲಿಯೇ ಇರುವ ಚಂದ್ರಶೇಖರ ಭಾರತಿ ಐಟಿಐ ವಿದ್ಯಾರ್ಥಿಗಳೇ ಈ ಕೃತ್ಯಕ್ಕೆ ಕಾರಣ ಎಂದು ಆರೋಪ ಕೇಳಿಬಂದಿದೆ.

ಸಿಗರೇಟು ಸೇದಲು ಬಂದ ವಿದ್ಯಾರ್ಥಿಗಳು ಗುಡಿಸಲಿಗೆ ಬೆಂಕಿ ಹಚ್ಚಿ ಹೋಗಿದ್ದಾರೆ ಎಂದು‌ ಸ್ಥಳೀಯರು ಆರೋಪ ಮಾಡಿದ್ದಾರೆ. ವಿದ್ಯಾರ್ಥಿಗಳ ಕೃತ್ಯ ಕಾಲೇಜಿನಲ್ಲಿ ಅಳವಡಿಸಿರುವ ಕ್ಯಾಮರಾದಲ್ಲೆ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ. ಈ ಕುರಿತು ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ