ಕೆಆರ್ಎಸ್ ಡ್ಯಾಂನಲ್ಲಿ 5 ದಿನಕ್ಕೆ 2 ಟಿಎಂಸಿ ನೀರು ಖಾಲಿ

ಸೋಮವಾರ, 4 ಸೆಪ್ಟಂಬರ್ 2023 (11:03 IST)
ಮಂಡ್ಯ : ಭಾರೀ ವಿರೋಧದ ನಡುವೆಯೂ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಕಾರಣ ಕೆಆರ್ಎಸ್ನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದೆ. ಕಳೆದ 5 ದಿನಗಳಲ್ಲಿ 2 ಟಿಎಂಸಿ ನೀರು ಖಾಲಿಯಾಗಿದ್ದು, ಜಲಾಶಯದಲ್ಲಿ ಸದ್ಯ 22 ಟಿಎಂಸಿಯಷ್ಟು ಮಾತ್ರ ನೀರು ಉಳಿದಿದೆ.

ಬುಧವಾರ ಸುಪ್ರೀಂ ಕೋರ್ಟ್ ಕಾವೇರಿ ನೀರಿನ ಸಂಬಂಧ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೂ ತಮಿಳುನಾಡಿಗೆ ನೀರು ಬಿಡುವುದನ್ನು ಮುಂದುವರಿಸಿದರೆ, ಡ್ಯಾಂನಲ್ಲಿ ಒಟ್ಟು 3 ಟಿಎಂಸಿ ನೀರು ಖಾಲಿಯಾಗಲಿದೆ. ಒಂದು ವೇಳೆ ಇನ್ನೂ 10 ದಿನ ನೀರು ಬಿಟ್ಟರೆ 6 ಟಿಎಂಸಿಯಷ್ಟು ನೀರು ಖಾಲಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇದರಿಂದ 22.70 ಟಿಎಂಸಿ ನಷ್ಟಿರುವ ನೀರಿನ ಪ್ರಮಾಣ 17 ಟಿಎಂಸಿಗೆ ಕುಸಿಯಲಿದೆ. ಇದರಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್ ತೆಗೆದುಹಾಕಿದ್ರೆ 12 ಟಿಎಂಸಿಯಷ್ಟು ನೀರು ಮಾತ್ರ ಉಳಿಯಲಿದೆ. ಇದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ನೀರು ಸಿಗುವುದು ಅಸಾಧ್ಯ ಎಂದು ಹೇಳಲಾಗುತ್ತಿದೆ.

ಈಗಾಗಲೇ ಬೆಳೆದಿರುವ ಕಬ್ಬು ಬೆಳೆ ಬಣಗುತ್ತಿವೆ. ಇದೇ ಸ್ಥಿತಿ ಮುಂದುವರಿದರೆ ಉಳಿದ ಬೆಳೆಗಳಿಗೂ ಸಮಸ್ಯೆಯಾಗಲಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.  ನಿನ್ನೆ ಕಾವೇರಿ ವಿಚಾರದಲ್ಲಿ ಜಲಸಂಪನ್ಮೂಲ ಸಚಿವರು ನೀಡುತ್ತಿರುವ ಹೇಳಿಕೆಗಳ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕಳವಳ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ