ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಬೃಹತ್ ಪ್ರತಿಭಟನೆ

ಶನಿವಾರ, 2 ಸೆಪ್ಟಂಬರ್ 2023 (07:45 IST)
ಮಂಡ್ಯ : ದಿನೇ ದಿನೇ ಕಾವೇರಿ ಕಿಚ್ಚು ಹೆಚ್ಚಾಗುತ್ತಿದ್ದು, ಮಂಡ್ಯದಲ್ಲಿ ಅನ್ನದಾತರು ಹಾಗೂ ರೈತ ಸಂಘಟನೆಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಇಂದು ಕಾವೇರಿ ಹೋರಾಟದ ಕಿಚ್ಚನ್ನು ಹೆಚ್ಚಿಸುವ ಸಲುವಾಗಿ ಜೆಡಿಎಸ್ ದಳಪತಿಗಳು ಅಖಾಡಕ್ಕಿಳಿಯಲಿದ್ದಾರೆ.

ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಶನಿವಾರ ಮಂಡ್ಯದಲ್ಲಿ ದಳ ಪಡೆಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಮಂಡ್ಯ ಜೆಡಿಎಸ್ ನಾಯಕರು ರಾಜ್ಯ ಸರ್ಕಾರಕ್ಕೆ ಎರಡು ದಿನಗಳ ಡೆಡ್ಲೈನ್ ನೀಡಿದ್ದು, ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ ಹರಿಸುತ್ತಿದ್ದ ನೀರು ನಿಲ್ಲಿಸುವಂತೆ ಆಗ್ರಹಿಸಿದ್ದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆಯಂತೆ ನಾಲ್ಕು ದಿನಗಳಿಂದ ನಿರಂತರವಾಗಿ ನೀರು ಬಿಡುಗಡೆ ಮಾಡುತ್ತಿದೆ. ರಾಜ್ಯ ಸರ್ಕಾರದ ನಡೆ ಹಾಗೂ ಪ್ರಾಧಿಕಾರದ ಆದೇಶ ಖಂಡಿಸಿ ಜೆಡಿಎಸ್ ಪ್ರತಿಭಟನೆ ನಡೆಸಲಿದೆ. 

ಮಂಡ್ಯದ ಸಿಲ್ವರ್ ಜುಬಿಲಿ ಪಾರ್ಕ್ನಲ್ಲಿ ಪ್ರತಿಭಟನೆ ಆರಂಭವಾಗಲಿದ್ದು, ಬೆಳಗ್ಗೆ 11 ಗಂಟೆಗೆ ಜೆಡಿಎಸ್ ಕಾವೇರಿ ಹೋರಾಟ ನಡೆಸಲಿದೆ. ಸಿಲ್ವರ್ ಜುಬಿಲಿ ಪಾರ್ಕ್ನಿಂದ ಮಂಡ್ಯ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಕಾವೇರಿ ಹೋರಾಟದಲ್ಲಿ ಹಾಲಿ, ಮಾಜಿ ಜೆಡಿಎಸ್ ಶಾಸಕರು, ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ