ಸಂಚಲನ ಮೂಡಿಸಿದ್ದ ಕೊಲೆ ರಹಸ್ಯ ಬಿಚ್ಚಿಟ್ಟ ಡೈರಿ

ಬುಧವಾರ, 19 ಅಕ್ಟೋಬರ್ 2016 (08:49 IST)

ಹುಬ್ಬಳ್ಳಿ: ಮದುವೆಯಾಗು ಎಂದ ಪ್ರೇಯಸಿಯನ್ನು ಕತ್ತು ಹಿಸುಕಿ ಸಾಯಿಸಿ, ಗದ್ದೆಯಲ್ಲಿ ಹೂತಿಟ್ಟಿದ್ದ ಕೊಲೆಗಡುಕ ಭೂಪನೊಬ್ಬ ಈಗ ಹುಬ್ಬಳ್ಳಿ ಪೊಲೀಸರ ಆತಿಥಿಯಾಗಿದ್ದಾನೆ.
 

ವಿಜಯಪುರ ಆದರ್ಶನಗರದ ನಿವಾಸಿ ಅರುಣ ಶಿವಲಿಂಗಪ್ಪ ಪಾಟೀಲ(23) ಎಂಬಾತನೇ ಕೊಲೆಗಾರ ಮಹಾಷಯ. ಇನ್ನೇನು ಈ ಪ್ರಕರಣಕ್ಕೆ ಸಾಕ್ಷಿಯೇ ಇಲ್ಲ ಎಂದು ಒಂದು ಪೊಲೀಸರು ವಿಚಾರಣೆ ಕೈಬಿಡುವ ಹಂತದಲ್ಲಿದ್ದಾಗ, ಅರುಣನ ಡೈರಿ ಕೊಲೆಯ ವೃತ್ತಾಂತವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತದೆ.

ಏನಿದು ಪ್ರಕರಣ?

2015ರ ಜೂನ್ 3ರಂದು ಮುಂಜಾನೆ 8ಕ್ಕೆ ಜಾಕೀರ ಮೊರಬ ಎಂಬವರು ಗಬ್ಬೂರ ಕ್ರಾಸ್ ಸಮೀಪದ ತಮ್ಮ ಹೊಲಕ್ಕೆ ಹೋಗುತ್ತಾರೆ. ಈ ವೇಳೆ ಅವರಿಗೆ ಯಾರದ್ದೋ ಕೈ ಹೊಲದಲ್ಲಿ ಹೂತಿರುವಂತೆ ಕಾಣಿಸುತ್ತದೆ. ಗಾಬರಿಗೊಂಡ ಜಾಕೀರ, ಕಸಬಾಪೇಟೆ ಪೊಲೀಸರಿಗೆ ದೂರು ನೀಡುತ್ತಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಯುವತಿಯನ್ನು ಕೊಲೆಗೈದು ಹೂತಿರುವುದು ಕಂಡು ಬರುತ್ತದೆ. ಮಳೆಯ ರಭಸಕ್ಕೆ ಮಣ್ಣು ಕೊಚ್ಚಿ 

ಹೋಗಿ ಆಕೆಯ ಕೈಯಷ್ಟೇ ಮೇಲಕ್ಕೆ ಕಾಣಿಸುತ್ತಿರುತ್ತದೆ. ಯುವತಿಯ ಶವ ಪರಿಶೀಲಿಸಿದಾಗ ಆಕೆ ಅಪ್ಜಲ್ಪುರ ಮೂಲದ ಗಿರಿಮಲ್ಲ ಬಿರಾದಾರ ಪುತ್ರಿ ಅರ್ಪಿತಾ ಎಂಬುದು ತಿಳಿದು ಬರುತ್ತದೆ. ಈಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಳು.
 

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅರ್ಪಿತಾಳನ್ನು ಯಾರು ಯಾಕೆ ಕೊಲೆ ಮಾಡಿರಬಹುದು ಎಂದು ಸಾಕಷ್ಟು ತನಿಖೆ ನಡೆಸುತ್ತಾರೆ. ಆಕೆಯೊಂದಿಗೆ ಸಲುಗೆಯಿಂದಿರುವ ಅರುಣನನ್ನು ಸಹ ವಿಚಾರಣೆ ನಡೆಸುತ್ತಾರೆ. ಆದರೆ ಆತನೇ ಅಪರಾಧಿ ಎನ್ನುವ ಕುರಿತು ಯಾವುದೇ ಸಾಕ್ಷಿಗಳು ಅವರಿಗೆ ಸಂದರ್ಭದಲ್ಲಿ ದೊರೆತಿರುವುದಿಲ್ಲ. ಆದರೂ ಆತನ ಬಗ್ಗೆ ಒಂದು ಕಣ್ಣಿಟ್ಟಿರುತ್ತಾರೆ. ಹೀಗಿದ್ದಾಗ ಕೆಲ ದಿನಗಳ ಹಿಂದೆ ಹುಬ್ಬಳ್ಳಿಗೆ ಆಗಮಿಸಿ ಅರುಣನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ಆತನಲ್ಲಿರುವ ಡೈರಿಯನ್ನು ನೋಡುತ್ತಾರೆ. ಪೊಲೀಸರು ತನ್ನನ್ನು ವಿಚಾರಿಸಿದಾಗ ತಾನು ಹೇಗೆ ತಪ್ಪಿಸಿಕೊಳ್ಳಬೇಕು ಎನ್ನುವ ಕುರಿತು ಕೆಲವಷ್ಟು ಮಾಹಿತಿಯನ್ನು ಆತ ಅದರಲ್ಲಿ ಬರೆದಿಟ್ಟಿರುತ್ತಾನೆ.
 

ಅಂದು ಏನಾಗಿತ್ತು...?

ಕೊಲೆಯಲ್ಲಿ ಪರ್ಯಾವಸನಗೊಂಡ ಈ ಪ್ರಕರಣ ಆರಂಭವಾಗುವುದು ಪ್ರೀತಿಯಿಂದ. ಅರುಣ ಹಾಗೂ ಅರ್ಪಿತಾ ವಿಜಯಪುರದಲ್ಲಿ ಒಂದೇ ಕಾಲೇಜಿನಲ್ಲಿ ಓದುತ್ತಿರುವಾಗ, ಇಬ್ಬರ ನಡುವೆಯೂ ಪ್ರೇಮಾಂಕುರವಾಗುತ್ತದೆ. ಮುಂದಿನ ಓದಿದಾಗಿ ಅರ್ಪಿತಾ ಧಾರವಾಡಕ್ಕೆ ಬಂದರೆ, ಅರುಣ ಬೆಂಗಳೂರಿಗೆ ಹೋಗುತ್ತಾನೆ. ಹೀಗಿರುವಾಗ ಅರ್ಪಿತಾ ಮದುವೆ ಮಾಡಿಕೊಳ್ಳುವಂತೆ ಅರುಣನಿಗೆ ಒತ್ತಾಯಿಸುತ್ತಾಳೆ. ಅದಕ್ಕೊಪ್ಪದ ಅರುಣ ಅರ್ಪಿತಾಳನ್ನು ಕೊಲೆಗೈಯುವ ನಿರ್ಧಾರಕ್ಕೆ ಬಂದು ದೃಶ್ಯಂ ಚಿತ್ರದಂತೆ ಪ್ಲಾನ್ ಮಾಡುತ್ತಾನೆ. 2 ಜೂನ್ 2015ಕ್ಕೆ ಹುಬ್ಬಳ್ಳಿಗೆ ಆಗಮಿಸುವ ಪೂರ್ವ,
 

ಪೊಲೀಸರಿಗೆ ಸುಳಿವು ಸಿಗಬಾರದೆನ್ನುವ ಕಾರಣಕ್ಕೆ ಮೊಬೈಲ್ ಬೆಂಗಳೂರಿನಲ್ಲಿಯೇ ಬಿಟ್ಟು ಬರುತ್ತಾನೆ. ಇಲ್ಲಿಗೆ ಬಂದು ಕಾಯಿನ್ಬೂತ್ ಮೂಲಕ ಅರ್ಪಿತಾಳಿಗೆ 3ರಂದು ಕರೆ ಮಾಡಿ, ಭೇಟಿಯಾಗುತ್ತಾನೆ. ನಂತರ ಬೆಂಗಳೂರಿಗೆ ಹೋಗೋಣವೆಂದು ಗಬ್ಬೂರ ಬೈಪಾಸ್ ಬಳಿಯ ಹೊಲಕ್ಕೆ ಕರೆದುಕೊಂಡು ಹೋಗಿ, ಕತ್ತು ಹಿಸುಕಿ ಸಾಯಿಸಿ, ಹೊಲದಲ್ಲಿ ಹೂತು ಬೆಂಗಳೂರಿಗೆ ಹೋಗುತ್ತಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ