ಪತ್ನಿಯ ಜೀವನ ನಿರ್ವಹಣೆಗೆ ಹಣ ನೀಡುವಂತೆ ನ್ಯಾಯಾಲಯದ ನಿರ್ದಿಷ್ಟ ಆದೇಶವಿರುವಾಗ ವಯಸ್ಸಾದ ತಂದೆ-ತಾಯಿಯ ಜತೆಗೆ ಪತ್ನಿಯಾದವಳ ಜೀವನ ನಿರ್ವಹಣೆಯನ್ನೂ ನೋಡಿಕೊಳ್ಳುವ ಹೊಣೆ ಆರೋಪಿಯ ಮೇಲಿದೆ. ಕೋರ್ಟ್ ಆದೇಶವಾಗಿ 10 ವರ್ಷಗಳೇ ಕಳೆದರೂ ಪತ್ನಿಗೆ ಹಣ ಪಾವತಿಸಿಲ್ಲ. ಈ ಮೂಲಕ ನ್ಯಾಯಾಲಯದ ಆದೇಶಕ್ಕೆ ಅಗೌರವ ತೋರಲಾಗಿದೆ. ಉದ್ದೇಶಪೂರ್ವಕವಾಗಿ ಕೋರ್ಟ್ ಆದೇಶಗಳನ್ನು ಉಲ್ಲಂಘಿಸಿರುವ ಆರೋಪಿ, ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ನ್ಯಾಯಾಂಗದ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ನ್ಯಾಯಾಧೀಶರು ಅತಿ ಸೂಕ್ಷ್ಮವಾಗಿ ವರ್ತಿಸಬಾರದು. ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ ನೋಡಿಕೊಂಡು ದಿವ್ಯ ಮೌನ ವಹಿಸಬೇಕೆಂದೂ ಅರ್ಥವಲ್ಲ. ನ್ಯಾಯದೇಗುಲದ ಘನತೆಯನ್ನು ಕುಗ್ಗಿಸಲು ಯಾರೊಬ್ಬರಿಗೂ ಅನುಮತಿಸಬಾರದು. ನ್ಯಾಯಾಲಯದ ಗೌರವದ ವಿಚಾರದಲ್ಲಿ ಯಾವುದೇ ರಾಜಿ ಅಥವಾ ಮೃದುತ್ವಕ್ಕೆ ಅವಕಾಶ ಇರಬಾರದು ಎಂದು ಹೈಕೋರ್ಟ್ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.