ಬೆಂಗಳೂರು: 26 ವರ್ಷದ ಯುವತಿಯ ಮೇಲೆ ನಾಲ್ವರಿಂದ ಗ್ಯಾಂಗ್‌ರೇಪ್

ಬುಧವಾರ, 18 ಮೇ 2016 (18:16 IST)
ನಗರದ ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯಿರುವ ಅಪಾರ್ಟ್‌ಮೆಂಟ್‌ ಕಾಂಪ್ಲೆಕ್ಸ್‌ನಲ್ಲಿ 26 ವರ್ಷ ವಯಸ್ಸಿನ ಯುವತಿಯ ಮೇಲೆ ನಾಲ್ಕು ಮಂದಿ ಕಾಮುಕರು ಗ್ಯಾಂಗ್‌ರೇಪ್ ಎಸಗಿದ ಹೇಯ ಘಟನೆ ವರದಿಯಾಗಿದೆ.
 
ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ .ಯುವತಿಯನ್ನು ಪರಿಚಿತನೊಬ್ಬನು ಅಪಾರ್ಟ್‌ಮೆಂಟ್‌ಗೆ ಬರುವಂತೆ ಆಹ್ವಾನ ನೀಡಿದ್ದನು ಎನ್ನಲಾಗಿದೆ. ಆತನ ಕರೆಗೆ ಓಗೊಟ್ಟು ಯುವತಿ ಅಪಾರ್ಟ್‌ಮೆಂಟ್‌ಗೆ ತೆರಳಿದಾಗ ಅಲ್ಲಿದ್ದ ಇತರ ಮೂವರು ಸೇರಿ ಗ್ಯಾಂಗ್‌ರೇಪ್ ಎಸಗಿದ್ದಾರೆ. ಆರೋಪಿಗಳು ಆಸ್ಸಾಂ ಮೂಲದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ನಾಲ್ಕು ಮಂದಿ ಆರೋಪಿಗಳು ಯುವತಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿ ಮಾರನೇ ದಿನ ಆಕೆಯನ್ನು ಆಕೆಯ ಮನೆಯ ಬಳಿ ಬಿಟ್ಟು, ಘಟನೆಯ ಬಗ್ಗೆ ಯಾರಿಗೂ ಬಾಯಿಬಿಡದಂತೆ ಬೆದರಿಕೆಯೊಡ್ಡಿದ್ದಾರೆ. ಎರಡು ದಿನಗಳವರೆಗೆ ಮೌನವಾಗಿದ್ದ ಯುವತಿ ಇಂದು ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. 
 
ಯುವತಿ ನೀಡಿದ ಮಾಹಿತಿಯ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಯ ಪತ್ತೆಗಾಗಿ ಜಾಲ ಬೀಸಲಾಗಿದೆ ಎಂದು ಡಿಸಿಪಿ ಬೋರಲಿಂಗಯ್ಯಾ ತಿಳಿಸಿದ್ದಾರೆ.
 
ಅತ್ಯಾಚಾರಕ್ಕೊಳಗಾದ ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಸಾಬೀತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ