ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ ಕರ್ತವ್ಯದಲ್ಲಿ ಬೊಜ್ಜು ಹೊಂದಿದ್ದ 65 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಬೊಜ್ಜು ಕರಗಿಸುವ ತರಬೇತಿ ನೀಡಲಾಗುತ್ತಿದೆ.
ಈ ಸಂಬಂಧ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರು ಪ್ರತಿಕ್ರಿಯಿಸಿ, ಈಗಾಗಲೇ ತರಬೇತಿ ಪಡೆದ ಹಲವರು 4ರಿಂದ 11ಕೆಜಿಯವರೆಗೆ ತೂಕ ಇಳಿಸಿಕೊಂಡಿದ್ದಾರೆ.
ನಗರದ ಗೋಕುಲ ರಸ್ತೆಯ ಹೊಸ ಸಿಎಆರ್ ಮೈದಾನದಲ್ಲಿ ಹಮ್ಮಿಕೊಂಡಿರುವ ಆರೋಗ್ಯ ಶಿಬಿರಕ್ಕೆ ಭೇಟಿ ನೀಡಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಬಿಎಂಐ (ಬಾಡಿ ಮಾಸ್ ಇಂಡೆಕ್ಸ್) ಪರೀಕ್ಷೆ ಮೂಲಕ ಸ್ಥೂಲಕಾಯದವರನ್ನು ಪತ್ತೆ ಹಚ್ಚಿ, ಅವರಿಗೆ ಜೂನ್ 9ರಿಂದ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. 28 ದಿನದ ತರಬೇತಿಯಲ್ಲಿ ಬಹುತೇಕರು ವ್ಯಾಯಾಮ, ಶ್ರಮ ಹಾಗೂ ಪಥ್ಯಾಹಾರದ ಮೂಲಕ ತೂಕ ಇಳಿಸಿಕೊಂಡಿದ್ದಾರೆ. ಇನ್ನೊಂದು ವಾರ ಶಿಬಿರ ಮುಂದುವರೆಯಲಿದ್ದು, ಮುಂದಿನ ದಿನಗಳಲ್ಲಿಮತ್ತೇ ಬೊಜ್ಜು ಇರುವವರನ್ನು ಗುರುತಿಸಿ ತರಬೇತಿ ನೀಡಲಾಗುತ್ತದೆ ಎಂದರು.
ನೇಮಕಾತಿ ಸಂದರ್ಭದಲ್ಲಿ ಎತ್ತರ, ತೂಕ, ಎದೆ ಸುತ್ತಳತೆ, ಓಟ, ಗುಂಡು ಎಸೆತ, ಎತ್ತರ ಜಿಗಿತ ಪರೀಕ್ಷೆ ನಡೆಸಲಾಗುತ್ತದೆ. ನೇಮಕವಾದ ನಂತರ ಅವರು ದೈಹಿಕ ಸದೃಢತೆ ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಸಿನಿಮಾದಲ್ಲಿ ತೋರಿಸುವಂತೆ ಪೊಲೀಸರಿಗೆ ಬೊಜ್ಜು ಇರುವುದಿಲ್ಲ. ಆರೋಗ್ಯದ ಸಮಸ್ಯೆಯಿಂದಾಗಿ ಕೆಲವರಿಗೆ ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.