ಪ್ರಿಯತಮೆಯ ಸಂತೋಷಕ್ಕಾಗಿ ಕಳ್ಳತನವೆಸಗುತ್ತಿದ್ದ ಆರೋಪಿ ಅರೆಸ್ಟ್

ಮಂಗಳವಾರ, 19 ಜುಲೈ 2016 (15:21 IST)
ಕಳ್ಳತನ ಮಾಡಿದ ಡೆಬಿಟ್ ಕಾರ್ಡ್‌ನಿಂದ ಮದ್ಯ ಖರೀದಿಸಿದ ಯುವಕ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ದಾವಣಗೆರೆಯ ನಿವಾಸಿಯಾಗಿದ್ದು, ಇತ್ತೀಚೆಗೆ ಧಾರವಾಡಕ್ಕೆ ಬಂದು ನೆಲೆಸಿದ್ದ 27 ವರ್ಷ ವಯಸ್ಸಿನ ವಿರೇಶ್ ಅಂಗಡಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
 
ಆರೋಪಿ ವಿರೇಶ್, ಹಳೆಯ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಪೊಲೀಸರು ಆತನನ್ನು ಬಂಧಿಸಿ 12 ಲ್ಯಾಪ್‌ಟಾಪ್, ಮೊಬೈಲ್ ಫೋನ್, ಡೆಬಿಟ್ ಕಾರ್ಡ್‌ಗಳು, ಹಾರ್ಡ್‌ಡಿಸ್ಕ್ ಸೇರಿದಂತೆ ಒಟ್ಟು 4.76 ಲಕ್ಷ ರೂಪಾಯಿಗಳ ಮೌಲ್ಯದ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 
 
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಪಾಂಡುರಂಗ ರಾಣೆ ಸುದ್ದಿಗಾರರೊಂದಿಗೆ ಮಾತನಾಡಿ, ಆರೋಪಿ 15 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. 
 
ಆರೋಪಿ ವಿರೇಶ್, ಆಸ್ಪತ್ರೆ, ಶಾಪಿಂಗ್ ಮಾಲ್‌ಗಳು ಮತ್ತು ರೆಸ್ಟುರಾಂಟ್‌ಗಳು ಬಳಿ ಪಾರ್ಕ್ ಮಾಡಲಾಗಿರುವ ಕಾರುಗಳ ವಿಂಡೋಪ್ಯಾನ್‌ಗಳನ್ನು ಡೈಮಂಡ್ ಕಟರ್ ಮೂಲಕ ಕತ್ತರಿಸಿ, ಲ್ಯಾಪ್‌ಟಾಪ್, ಬ್ಯಾಗ್‌ ಮತ್ತು ಇತರ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಎನ್ನಲಾಗಿದೆ.
 
ಯೂ-ಟ್ಯೂಬ್‌ನಲ್ಲಿ ಕಳ್ಳತನದ ಘಟನೆಗಳನ್ನು ವೀಕ್ಷಿಸಿ ಅದರಂತೆ, ತಾನು ಹೊಸ ಕೈಚಳಕ ತೋರಲು ಮುಂದಾಗಿದ್ದ. ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಸಂತೋಷವಾಗಿಡಲು ಕಳ್ಳತನಕ್ಕೆ ಇಳಿದಿರುವುದಾಗಿ ಆರೋಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
 
ಪಾರ್ಕ್ ಮಾಡಿದ ಕಾರುಗಳಲ್ಲಿರುವ ಬ್ಯಾಗ್‌ಗಳಲ್ಲಿ ಹಣ ಅಥವಾ ಚಿನ್ನಾಭರಣವಿರಬಹುದು ಎಂದು ಭಾವಿಸಿ ಕಳ್ಳತನ ಮಾಡುತ್ತಿದ್ದ. ಆದರೆ, ಬಹುತೇಕ ಬ್ಯಾಗ್‌ಗಳಲ್ಲಿ ಲ್ಯಾಪ್‌ಟಾಪ್‌ಗಳು ಮಾತ್ರ ದೊರೆತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. 
 
ಜೆಸಿ ನಗರದಲ್ಲಿ ಮದ್ಯ ಖರೀದಿಸಲು ವಿರೇಶ್ ಡೆಬಿಟ್ ಕಾರ್ಡ್ ಬಳಸಿರುವುದು ಪೊಲೀಸರ ತನಿಖೆಗೆ ಹೊಸ ತಿರುವು ಪಡೆದುಕೊಂಡಿತು.
 
ಪೊಲೀಸರು ಬಾರ್‌ನಲ್ಲಿರುವ ಸಿಸಿಟಿವಿ ಪರಿಶೀಲಿಸಿದಾಗ ವಿರೇಶ್ ಮದ್ಯ ಖರೀದಿಸುತ್ತಿರುವ ದೃಶ್ಯ ಕಂಡು ಬಂದಿದೆ. ಕೂಡಲೇ  ಆರೋಪಿ ವಿರೇಶ್‌ನನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ