ಬೆಂಗಳೂರು: ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧಿ ಪೂರೈಕೆಯಿಂದ ಗರ್ಭಿಣಿ ಹಾಗು ಬಾಣಂತಿ ಮಹಿಳೆಯರ ಸಾವಾಗುತ್ತಿರುವುದಕ್ಕೆ ಕಾಂಗ್ರೆಸ್ ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ಕಾರಣವಾಗಿದ್ದು, ಕಾಂಗ್ರೆಸ್ ಸರ್ಕಾರ ಮಹಿಳೆಯರ ಕಗ್ಗೊಲೆ ಮಾಡಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ತಮ್ಮ ಕುರ್ಚಿ ಉಳಿಸಿಕೊಳ್ಳಲು ಸ್ವಾಭಿಮಾನಿ ಸಮಾವೇಶ, ಸಂಪುಟ ಪುನಾರಚನೆ ಎಂದು ರಾಜಕೀಯದಾಳ ಎಸೆಯುವಲ್ಲಿ ತಾವು ತೋರುತ್ತಿರುವ ಆಸಕ್ತಿಯಲ್ಲಿ ಸ್ವಲ್ಪವಾದರೂ ಆಡಳಿತದಲ್ಲಿ ತೋರಿಸಿ. ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡ ಕುಟುಂಬದ ಮಹಿಳೆಯರಿಗೆ ಜೀವಂತವಾಗಿ ಮನೆಗೆ ಹೋಗುವ ಗ್ಯಾರೆಂಟಿ ಕೊಡಿ. ತಾಯಿ-ಮಗೂ ಸುರಕ್ಷಿತವಾಗಿ ಮನೆ ಸೇರುವ ಗ್ಯಾರೆಂಟಿ ಕೊಡಿ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಸಚಿವ ಎಸ್ ಶರಣ ಪ್ರಕಾಶ್ ಪಾಟೀಲ್ ಹಾಗು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರನ್ನ ಕೂಡಲೇ ಸಂಪುಟದಿಂದ ವಜಾ ಮಾಡಿ. ಬಾಣಂತಿ ಮಹಿಳೆಯರ ಸರಣಿ ಸಾವಿನ ಬಗ್ಗೆ ತಜ್ಞ ವೈದ್ಯರ ತನಿಖಾ ತಂಡ ನೀಡಿರುವ ವರದಿಯನ್ನ ಬಹಿರಂಗ ಮಾಡಿ ಈ ಪ್ರಕರಣವನ್ನ ಎಸ್ಐಟಿ ತನಿಖೆಗೆ ಒಪ್ಪಿಸಿ.