ರಾಜ್ಯದಲ್ಲಿ ಮಳೆಯ ಆರ್ಭಟಕ್ಕೆ ಸಿಕ್ಕಿ ನಲುಗಿದ 283 ಗ್ರಾಮಗಳು!
ಸೋಮವಾರ, 26 ಜುಲೈ 2021 (10:29 IST)
ಕರ್ನಾಟಕದಲ್ಲಿ ಮುಂಗಾರು ಮಳೆಯ ಅಬ್ಬರ ತೀವ್ರವಾಗಿದ್ದು, ಕಳೆದ ಹತ್ತು ದಿನಗಳಿಂದ ರಾಜ್ಯದ ಹಲವೆಡೆ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ. ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆಗೆ ರಾಜ್ಯದಲ್ಲಿ ನದಿಗಳು ಪ್ರವಾಹ ಮಟ್ಟದಲ್ಲಿ ಹರಿಯುತ್ತಿದ್ದು, ಜನರಿಗೆ ಆತಂಕ ಮೂಡಿಸಿದೆ. ಬಹುತೇಕ ಡ್ಯಾಂಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ಇದರಿಂದ ನದಿಪಾತ್ರದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ.
ಹಲವೆಡೆ ಮನೆಗಳು ಕುಸಿದಿವೆ. ಇನ್ನೂ ಕೆಲವೆಡೆ ಸೇತುವೆಗಳು ಮುಳುಗಡೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಬೆಳೆಗಳು ನಾಶವಾಗಿವೆ. ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿಗಳು ಜಲಾವೃತಗೊಂಡಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
ಕಳೆದ 2 ವಾರಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸುಮಾರು 31,360 ಮಂದಿಯನ್ನು ತಗ್ಗು ಪ್ರದೇಶಗಳಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸುಮಾರು 22,417 ಜನರು 237 ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಪ್ರಕಾರ, ಸುಮಾರು 283 ಗ್ರಾಮಗಳು, 45 ತಾಲೂಕುಗಳು ಮಳೆಯ ಹೊಡೆತಕ್ಕೆ ಸಿಕ್ಕಿದ್ದು, 36,498 ಜನರು ಅಕ್ಷರಶಃ ನಲುಗಿದ್ದಾರೆ.
ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಳೆಯಿಂದಾಗಿ ಕಳೆದ 72 ಗಂಟೆಗಳಲ್ಲಿ 9 ಮಂದಿ ಸಾವನ್ನಪ್ಪಿದ್ದು, ಮೂರು ಜನರು ಕಣ್ಮರೆಯಾಗಿದ್ದಾರೆ. ಸುಮಾರು 3,502 ವಿದ್ಯುತ್ ಕಂಬಗಳು ಧರೆಗುರುಳಿವೆ. 342 ಟ್ರಾನ್ಸ್ಫಾರ್ಮರ್ಗಳು ಹಾನಿಯಾಗಿದ್ದು, ಹಲವಾರು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಇಷ್ಟೇ ಅಲ್ಲದೇ, ಉತ್ತರ ಕರ್ನಾಟಕ ಭಾಗದಲ್ಲಿ ಸುಮಾರು 59,000 ಹೆಕ್ಟೇರ್ ಬೆಳೆ ಮಳೆಯಿಂದಾಗಿ ನಾಶವಾಗಿದೆ. ಅಧಿಕ ಮಳೆಯಿಂದಾಗಿ ಸುಮಾರು 2,000 ಹೆಕ್ಟೇರ್ ತೋಟಗಾರಿಕಾ ಬೆಳೆ ನಾಶವಾಗಿದೆ. ಮಳೆರಾಯನ ಅಬ್ಬರಕ್ಕೆ 134 ಮನೆಗಳು ಸಂಪೂರ್ಣವಾಗಿ ಕುಸಿದಿವೆ, 2,480 ಮನೆಗಳು ಭಾಗಶಃ ಹಾನಿಯಾಗಿವೆ. 213 ಶಾಲೆಗಳು ಭಾಗಶಃ ಹಾನಿಯಾಗಿವೆ.
ಶಿವಮೊಗ್ಗ ಜಿಲ್ಲೆ ಮಳೆಯ ಆರ್ಭಟಕ್ಕೆ ಸಿಕ್ಕಿ ಸಂಪೂರ್ಣ ನಲುಗಿದೆ. ಇಲ್ಲಿ 2864 ವಿದ್ಯುತ್ ಕಂಬಗಳು ಧರೆಗುರುಳಿವೆ. 274 ಟ್ರಾನ್ಸ್ಫಾರ್ಮರ್ಗಳು ಹಾನಿಯಾಗಿವೆ. ಇಲ್ಲಿನ ಅನೇಕ ಹಳ್ಳಿಗಳಿಗೆ ಕಳೆದ 2 ವಾರಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಪಶ್ಚಿಮ ಘಟ್ಟ ಭಾಗದಲ್ಲಿ 16 ಕಡೆ ದೊಡ್ಡ ಭೂಕುಸಿತ ಸಂಭವಿಸಿದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ 73 ಕಡೆ ಸಣ್ಣದಾಗಿ ಭೂ ಕುಸಿತ ಆಗಿದ್ದು, ಹೆದ್ದಾರಿಗಳು ಬಂದ್ ಆಗಿವೆ. ಹಾನಿಯಾಗಿರುವ ಹೆದ್ದಾರಿಗಳನ್ನು ರಿಪೇರಿ ಮಾಡಲು ಸುಮಾರು 1 ತಿಂಗಳು ಸಮಯ ಬೇಕಾಗುತ್ತದೆ. ಕೆಎಸ್ಡಿಎಂಎ ಮಳೆಯ ಪರಿಸ್ಥಿತಿಯನ್ನು ನಿಭಾಯಿಸಲು 16 ಎಸ್ಡಿಆರ್ಎಫ್ ತಂಡ ಮತ್ತು 7 ಎನ್ಡಿಆರ್ಎಫ್ ತಂಡಗಳನ್ನು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ನಿಯೋಜಿಸಿದೆ.
ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆಯ ಆರ್ಭಟ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು (ಜು.26) ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ 4-5 ದಿನಗಳಲ್ಲಿ ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರತೆ ಕಡಿಮೆಯಾಗಲಿದ್ದು, ಮಳೆರಾಯ ಕೊಂಚ ವಿರಾಮ ಕೊಡಲಿದ್ದಾನೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮುಂಗಾರು ಮಳೆ ಪ್ರಾರಂಭವಾದಾಗಿನಿಂದ 501.6 ಮಿ.ಮೀ ಮಳೆ ಸುರಿದಿದೆ. ಪ್ರತೀ ವರ್ಷ ಸಾಮಾನ್ಯವಾಗಿ 403.8 ಮಿ.ಮೀ ಮಳೆಯಾಗುತ್ತಿತ್ತು. ಈ ಬಾರಿ ಹೆಚ್ಚುವರಿ ಶೇ.24ರಷ್ಟು ಮಳೆಯಾಗಿದೆ. ಬೆಂಗಳೂರಿನಲ್ಲಿ ಶನಿವಾರ ರಾತ್ರಿ 8.30ರವರೆಗೆ 24.4 ಮಿ.ಮೀ. ಮಳೆ ದಾಖಲಾಗಿದೆ. ಹೆಚ್ಎಎಲ್ ಏರ್ಪೋರ್ಟ್ ಒಂದರಲ್ಲೇ 16.6 ಮಿ.ಮೀ ಮಳೆ ಸುರಿದಿದೆ.
ಭಾನುವಾರ ಸಿಎಂ ಬಿಎಸ್ ಯಡಿಯೂರಪ್ಪ ಪ್ರವಾಹ ಪೀಡಿತ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಕಂದಾಯ ಸಚಿವ ಆರ್. ಅಶೋಕ್ ಕೂಡ ಜೊತೆಗಿದ್ದರು.
ರಾಜಧಾನಿ ಬೆಂಗಳೂರಿನಲ್ಲಿ ಮೊನ್ನೆವರೆಗೂ ಜಿಟಿ-ಜಿಟಿ ಮಳೆ ಸುರಿಯುತ್ತಿತ್ತು. ನಿನ್ನೆ ಇಡೀ ದಿನ ನಗರದಲ್ಲಿ ಧಾರಾಕಾರ ಮಳೆಯಾಗಿದೆ. ಇಂದೂ ಸಹ ಮಳೆಯಾಗುವ ಸಾಧ್ಯತೆ ಇದೆ.