ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮಳೆ ಆರ್ಭಟ; ಹಲವೆಡೆ ಹಾನಿ

ಶನಿವಾರ, 17 ಜುಲೈ 2021 (10:09 IST)
ಮಂಗಳೂರು (ಜು. 17) ರಾಜ್ಯದ ಕರಾವಳಿಯಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಜಿಲ್ಲಾದ್ಯಂತ ನಿರಂತರ ಗಾಳಿ ಮಳೆಯಾಗಿದ್ದು ಜೀವನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಸಮುದ್ರ ರಾಜನ ಅಬ್ಬರವೂ ಹೆಚ್ಚಾಗಿದ್ದು ಕಡಲ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದೆ. ಮುಂದಿನ ನಾಲ್ಕು ದಿನ ಕೂಡಾ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಗಾಳಿ-ಮಳೆಯಾಗಿದೆ. ಜಿಲ್ಲೆಯ ಜನ ಜೀವನ ಅಸ್ತವ್ಯಸ್ತ ವಾಗಿದೆ.  ನಗರದಲ್ಲಿ ಸುರಿದ ಭಾರೀ ಮಳೆಗೆ ರಸ್ತೆಗಳಲ್ಲೇ ಮಳೆ ನೀರು ಹರಿದಿದ್ದು, ಮಳೆಗೆ ವಾಹನ ಸವಾರರು ಹೈರಾಣವಾಗಿದ್ದು, ಕೆಲವು ತಗ್ಗು ಪ್ರದೇಶಗಳಲ್ಲಿ ಮಳೆನೀರು ನಿಂತು ಜನ ಪರದಾಡುವಂತಾಗಿದೆ.  ಜಿಲ್ಲಾದ್ಯಂತ ಹವಾಮಾನ ಇಲಾಖೆ ಅರೆಂಜ್ ಅಲರ್ಟ್ ಘೋಷಿಸಿದ್ದು, ಇಂದು ರೆಡ್ ಅಲರ್ಟ್ ಘೋಷಣೆ ಮಾಡಿದೆ. ಹೀಗಾಗಿ  ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಮಳೆಯ ಅಬ್ಬರ ಎಲ್ಲೆಡೆ ಇದ್ರೂ ಇನ್ನೊಂದೆಡೆಯಲ್ಲಿ ಅರಬ್ಬಿ ಸಮುದ್ರವೂ ಸಂಪೂರ್ಣ ಪ್ರಕ್ಷುಬ್ಧ ಗೊಂಡಿದೆ. ಪಶ್ಚಿಮ ಘಟ್ಟ ಸೇರಿದಂತೆ ಜಿಲ್ಲಾದ್ಯಂತ ಮಳೆಯಾಗಿರೋದ್ರಿಂದ ಜಿಲ್ಲೆಯ ಎಲ್ಲಾ ಜೀವನದಿಗಳು ತುಂಬಿ ಹರಿಯುತ್ತಿದೆ. ನದಿ ನೀರು ಸಮುದ್ರ ಸೇರಿ ಸಮುದ್ರದ ಅಬ್ಬರ ಹೆಚ್ಚಾಗಿದ್ದು ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ. ಮಂಗಳೂರಿನ ಉಳ್ಳಾಲದ ಬಟ್ಟಪಾಡಿ, ಸೋಮೇಶ್ವರ, ಉಚ್ಚಿಲ, ಸುರತ್ಕಲ್ , ಸಸಿಹಿತ್ಲು ಕಡಲ ಕಿನಾರೆಯಲ್ಲಿ ಅಬ್ಬರ ಹೆಚ್ಚಾಗಿದ್ದು ಇಲ್ಲಿನ ತೆಂಗಿನ ಮರಗಳು ಸಮುದ್ರ ಪಾಲಾಗಿದ್ದು ತೀರದ ಮನೆಗಳತ್ತ ಅಲೆಗಳು ಬರಲಾರಂಭಿಸಿದೆ.
ಕಳೆದ ಕೆಲ ದಿನಗಳಿಂದ ಆಗ್ಗಾಗೆ ಸುರಿಯುತ್ತಿದ್ದ ಮಳೆರಾಯ ನಿನ್ನೆ ತನ್ನ ರೌದ್ರ ನರ್ತನವನ್ನು ಕರಾವಳಿಯ ಜನತೆಗೆ ತೋರಿಸಿ ಕೊಟ್ಟಿದ್ದಾನೆ. ಆರೆಂಜ್ ಅಲರ್ಟ್ ಇದ್ದಾಗಲೇ ಭಾರೀ ಮಳೆಯಾಗಿದ್ದು, ರೆಡ್ ಅಲರ್ಟ್ ಇರೋದ್ರಿಂದ ಇನ್ಯಾವ ರೀತಿಯ ಮಳೆಯ ಆರ್ಭಟ ಇದೆ ಅನ್ನೋ ಭೀತಿ ಕರಾವಳಿಯ ಜನತೆಗೆ ಎದುರಾಗಿದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರಿದಿದೆ. ಜಿಲ್ಲೆಯ ಗ್ರಾಮೀಣ ಭಾಗ ಸೇರಿದಂತೆ ಮಂಗಳೂರಿಗೆ ನಗರ ಭಾಗದಲ್ಲೂ ಭಾರೀ ಮಳೆಯಾಗುತ್ತಿದೆ. ರೈಲು ಹಳಿ ಮೇಲೆ ಮಣ್ಣು ಕುಸಿದು ರೈಲು ಸಂಚಾರ ಬಂದ್ ಆಗಿರುವ ಘಟನೆ ಮಂಗಳೂರು ಜಂಕ್ಷನ್ ಮತ್ತು ತೋಕೂರು ರೈಲ್ವೇ ಸ್ಟೇಷನ್ ಮಧ್ಯೆ ನಡೆದಿದೆ.
ಮಂಗಳೂರು ಹೊರವಲಯದ ಕುಲಶೇಖರ ಟನಲ್ ಬಳಿ ಹಳಿಗೆ ಮಣ್ಣು ಕುಸಿತವಾಗಿದ್ದು, ಕೊಂಕಣ್ ರೈಲ್ವೇ ವಿಭಾಗದ ರೈಲು ಸಂಚಾರ ವ್ಯತ್ಯಯವಾಗಿದೆ. ರೈಲ್ವೇ ಇಲಾಖಾ ಸಿಬ್ಬಂದಿ ಕೆಲವೇ ಗಂಟೆಗಳಲ್ಲಿ  ತೆರವುಗೊಳಿಸಿ ರೈಲು ಸಂಚಾರಕ್ಕೆ ಅನುವು ಮಾಡಕೊಡಲಿದ್ದು, ಮಣ್ಣು ತೆರವು ಕಾರ್ಯ ಆರಂಭವಾಗಿದೆ. ರೈಲು ಹಳಿಯ ತುಂಬಾ ಮಣ್ಣು ತುಂಬಿ ಕೊಂಡಿದೆ. ಅಲ್ಲದೇ ನೀರು ಕೂಡಾ ತುಂಬಿ ಕೊಂಡಿದ್ದು,ಮಣ್ಣು ತೆರವು ಮಾಡಲು ಹರಸಾಹಸ ಪಡುವಂತಾಗಿದೆಜುಲೈ19ರ ವರೆಗೆ ಕರಾವಳಿಯಾದ್ಯಾಂತ ಭಾರೀ ಮಳೆಗುವ ಮುನ್ಸೂಚನೆ ಯನ್ನು ಹವಾಮಾನ ಇಲಾಖೆ ನೀಡಿದ್ದು,ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಾಧಾರಾ ನದಿ ಮೈ ತುಂಬಿ ಹರಿಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ