ಮೂರು ಜೀವಗಳನ್ನು ಕಾಪಾಡಿದ ರೈಲ್ವೆ ಪೊಲೀಸರು ...!!!!

ಬುಧವಾರ, 17 ಆಗಸ್ಟ್ 2022 (17:53 IST)
ರೈಲು ಹಳಿ ಮೇಲೆ ತನ್ನಿಬ್ಬರು ಮಕ್ಕಳೊಂದಿಗೆ ಮಲಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ 24 ವರ್ಷದ ಮಹಿಳೆಯನ್ನು ರೈಲ್ವೆ ರಕ್ಷಣಾ ಪಡೆ (RPF) ಪೊಲೀಸರು ಕಾಪಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
 
ಬೆಂಗಳೂರಿನ ಬಳಿ ಚನ್ನಸಂದ್ರ ರೈಲು ನಿಲ್ದಾಣ ಬಳಿ ಈ ಘಟನೆ ನಡೆದಿದ್ದು ರೈಲು ಹಳಿ ಮೇಲೆ ಮಲಗಿದ್ದ ಮಹಿಳೆಯನ್ನು ರೈಲ್ವೆ ಪೊಲೀಸರು ತಕ್ಷಣವೇ ಹೋಗಿ ಮೇಲಕ್ಕೆತ್ತಿ ತಂದಿದ್ದರಿಂದ ಮೂರು ಜೀವಗಳು ಉಳಿದಿವೆ.
 
ಪತಿಯಿಂದ ಮಾನಸಿಕ ಹಿಂಸೆ, ಕಿರುಕುಳ ತಾಳಲಾರದೆ ಮಹಿಳೆ ತನ್ನಿಬ್ಬರು ಪುಟ್ಟ ಮಕ್ಕಳೊಂದಿಗೆ ಈ ಕೃತ್ಯಕ್ಕೆ ಇಳಿದಿದ್ದಳು ಎನ್ನಲಾಗಿದೆ.
 
ಈ ಘಟನೆ ನಡೆದಿದ್ದು ಮೊನ್ನೆ ಸ್ವಾತಂತ್ರ್ಯ ದಿನಾಚರಣೆಯಂದು ಸಾಯಂಕಾಲ 4.45ರ ಸುಮಾರಿಗೆ, ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಲ್ ನಿಂದ ತಿರುವನಂತಪುರ ಕೇಂದ್ರ ನಿಲ್ದಾಣಕ್ಕೆ ರೈಲು ಪ್ರಯಾಣಿಸುತ್ತಿತ್ತು. ಬೆಂಗಳೂರು ರೈಲ್ವೆ ವಲಯದ ಚನ್ನಸಂದ್ರ ನಿಲ್ದಾಣ ಬಳಿ ರೈಲು ಆಗಮಿಸುತ್ತಿತ್ತು.
 
ಚನ್ನಸಂದ್ರ ಕ್ರಾಸ್ ದಾಟುವ ಸ್ವಲ್ಪ ಹೊತ್ತಿನ ಮೊದಲು ಮಹಿಳೆ ತನ್ನಿಬ್ಬರು ಪುಟ್ಟ ಮಕ್ಕಳನ್ನು ಕರೆದುಕೊಂಡು ಹೋಗಿ ರೈಲು ಹಳಿಯ ಮೇಲೆ ಮಲಗಿದ್ದಾಳೆ. ಆ ವೇಳೆ ಅಲ್ಲಿ ಗಸ್ತು ತಿರುಗುತ್ತಿದ್ದ ಆರ್ ಪಿಎಫ್ ಇನ್ಸ್ ಪೆಕ್ಟರ್ ವಿ ಎನ್ ಚಂಬಣ್ಣ ಮಹಿಳೆಯನ್ನು ಕಂಡು ಅಲ್ಲಿದ್ದ ಕೆಲವು ಮಹಿಳೆಯರನ್ನು ಬರಲು ಹೇಳಿ ಸಾಯಲು ಹೊರಟ ಮಹಿಳೆಯನ್ನು ಪಕ್ಕಕ್ಕೆ ಎಳೆಯುವಂತೆ ಸೂಚಿಸಿದರು.
 
ಅಷ್ಟು ಹೊತ್ತಿಗೆ ಎದುರಿನಿಂದ ರೈಲು ಬರುತ್ತಿರುವುದನ್ನು ಗಮನಿಸಿದ ಚಂಬಣ್ಣ ಕೂಡಲೇ ಮಹಿಳೆಯನ್ನು ಎಳೆದು ಪ್ರಾಣ ಕಾಪಾಡಿದರು. ಕಾನ್ಸ್ಟೇಬಲ್ ಡಿಯೊ ಪ್ರಕಾಶ್ ಅವರಿಗೆ ನೆರವಾದರು. ಕೂದಲೆಳೆ ಅಂತರದಲ್ಲಿ ಮಹಿಳೆಯನ್ನು ಸಾವಿನಿಂದ ಕಾಪಾಡಿದ್ದರು.
 
ಸಂಪೂರ್ಣ ಖಿನ್ನತೆ ಸ್ಥಿತಿಯಲ್ಲಿದ್ದ ಮಹಿಳೆಗೆ ಎನ್ ಜಿಒ ನೆರವಿನಿಂದ ಆಪ್ತ ಸಮಾಲೋಚನೆ ನೀಡಲಾಗಿದೆ. ಮಹಿಳೆಯನ್ನು ಮಾತನಾಡಿಸಲು ಎನ್ ಜಿಒ ಕಾರ್ಯಕರ್ತರಿಗೆ ಮೂರು ಗಂಟೆ ಹಿಡಿಯಿತು. ಪದವೀಧರೆಯಾಗಿರುವ ಮಹಿಳೆ ದೂರವಾಣಿ ನಗರದ ದರ್ಗಾ ಮೊಹಲ್ಲಾ ಪ್ರದೇಶದ ನಿವಾಸಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ