ಬೆಂಗಳೂರು: ನಗರದ ನಿಷೇಧಿತ ಪ್ರದೇಶಗಳಲ್ಲಿ ವಾಹನ ಟೋಯಿಂಗ್ ಸೋಗಿನಲ್ಲಿ ಅಡ್ಡಾದಿಡ್ಡಿ ಟೊಯಿಂಗ್ ಮಾಡಿದ್ದ 32 ಟೋಯಿಂಗ್ ವಾಹನ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದು ಮಾಡಿ ಟ್ರಾಫಿಕ್ ಕಮೀಷನರ್ ಬಿ.ಆರ್.ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.
ವಾಹನ ಸವಾರರೊಂದಿಗೆ ದುರ್ನಡತೆ, ಅಡ್ಡಾದಿಡ್ಡಿ ಟೋಯಿಂಗ್, ವಾಹನದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸದಿರುವುದು, ಮೈಕ್‌ನಲ್ಲಿ ಅನೌನ್ಸ್ ಮಾಡುವುದು ಸೇರಿದಂತೆ ವಿವಿಧ ಟೋಯಿಂಗ್ ಮಾನದಂಡ ಉಲ್ಲಂಘಿಸಿದ ಹಿನ್ನೆಲೆಯಲ್ಲಿ 32 ಟೋಯಿಂಗ್ ವಾಹನ ಪರವಾನಗಿ ರದ್ದು ಮಾಡಲಾಗಿದೆ.
ನಗರದಲ್ಲಿ ಟೋಯಿಂಗ್ ವಾಹನಗಳು ಅಡ್ಡಾದಿಡ್ಡಿಯಾಗಿ ಟೋಯಿಂಗ್ ಮಾಡುತ್ತಿವೆ. ಟೋಯಿಂಗ್ ಮಾಡುವಾಗ ವಾಹನಗಳಿಗೆ ಹಾನಿಯಾಗುವ ರೀತಿಯಲ್ಲಿ ಮಾಡಲಾಗುತ್ತಿದೆ ಎಂದು ವಾಹನ ಸವಾರರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಜೊತೆಗೆ ಸಾರ್ವಜನಿಕರಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆಯು ದೂರುಗಳು ಕೇಳಿಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಂಚಾರಿ ವಿಭಾಗದ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಟೋಯಿಂಗ್ ಮಾನದಂಡ ಉಲ್ಲಂಘನೆ ಬಗ್ಗೆ ಆಯಾ ವಿಭಾಗದ ಡಿಸಿಪಿಗಳಿಗೆ ವರದಿ ಕೇಳಿದ್ದರು.
ಇದರಂತೆ ಪಶ್ವಿಮ ವಿಭಾಗದ ಸಂಚಾರಿ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ 20ಕ್ಕೂ ಹೆಚ್ಚು ವಾಹನಗಳು ಹಾಗೂ ದುರ್ನಡತೆ ತೋರಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ವರದಿ ನೀಡಿದ್ದರು. ಅದೇ ರೀತಿ ಎಲ್ಲಾ ಡಿಸಿಪಿಗಳು ವರದಿ ನೀಡಿದ್ದರು. ಇದರಂತೆ ಟೋಯಿಂಗ್ ಮಾರ್ಗಸೂಚಿ ಉಲ್ಲಂಘಿಸಿದ 30 ವಾಹನಗಳ ಪರವಾನಗಿ ರದ್ದು ಮಾಡಿ ಆರು ಮಂದಿ ಪೊಲೀಸರನ್ನು ಅಮಾನತು ಮಾಡಿದ್ದಾರೆ.
ಟ್ರಾಫಿಕ್ ಅಸ್ಟಿಸೆಂಟ್ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಗಮನಕ್ಕೆ ತರದೆ ವಾಹನ ಸವಾರರಿಂದ ರಶೀದಿ ನೀಡದೆ ಹಣ ಪಡೆಯುತ್ತಿರುವ ಪ್ರಸಂಗ ಹೆಚ್ಚಾಗಿತ್ತು. ಈ ನಿಟ್ಟಿನಲ್ಲಿ ಆರು ಮಂದಿ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ಇನ್ನೂ ಟೋಯಿಂಗ್ ಮಾಡುವಾಗ ಸರ್ಕಾರದ ಮಾರ್ಗಸೂಚಿ ಪಾಲಿಸುವಂತೆ ತಿಳಿ ಹೇಳಲಾಗಿದೆ.
ಟೋಯಿಂಗ್ ಮಾಡುವಾಗ ಸಿಬ್ಬಂದಿ ಪಾಲಿಸಬೇಕಾದ ನಿಯಮಗಳು :
* ನಿಷೇಧಿತ ಪ್ರದೇಶದಲ್ಲಿ ವಾಹನ ನಿಲ್ಲಿಸಿದಾಗ ಮಾತ್ರ ಟೋಯಿಂಗ್ ಮಾಡಬೇಕು.
* ಟೋಯಿಂಗ್ ಮಾಡುವ ಮೈಕ್‌ನಲ್ಲಿ ವಾಹನ ನೋಂದಣಿ ಸಂಖ್ಯೆ ಸಮೇತ ಅನೌನ್ಸ್ ಮಾಡಬೇಕು.
*ವಾಹನದ ವಾರಸುದಾರರ ಬರದೆ ಹೋದರೆ ಮೊದಲು ಸಿಬ್ಬಂದಿ ಮೊಬೈಲ್ನಲ್ಲಿ ಫೋಟೊ ಹಿಡಿದಿಟ್ಟುಕೊಳ್ಳುವುದು ಕಡ್ಡಾಯ.