ಚೀನಾದಲ್ಲಿ ಪ್ರತಿದಿನ 5 ಸಾವಿರ ಸಾವು
ಕೊರೋನಾ ವೈರಸ್ ಸೋಂಕಿನ ಮೊದಲು ಮೂರು ಅಲೆಗಳಿಂದ ಬಚಾವಾಗಿದ್ದ ಚೀನಾ ಇದೀಗ ವೈರಾಣು ಬಲೆಯಲ್ಲಿ ಸಿಲುಕಿದೆ. ಹೊರಬರುವ ಮಾರ್ಗ ಕಾಣದೆ ಪರಿತಪಿಸುತ್ತಿದೆ. ಚೀನಾದಲ್ಲಿ ಪ್ರತಿದಿನ ಸರಾಸರಿ 5,000 ಮಂದಿ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಪ್ರತಿದಿನ ವರದಿಯಾಗುತ್ತಿರುವ ಸರಾಸರಿ ಸೋಂಕು ಪ್ರಕರಣಗಳು 10 ಲಕ್ಷ ದಾಟಿದೆ. ಜಗತ್ತಿನಲ್ಲಿ ಈವರೆಗೆ ವರದಿಯಾಗಿದ್ದ ಸೋಂಕು ಪ್ರಸರಣದ ದಾಖಲೆಗಳನ್ನು ಇದು ಮುರಿದಿದೆ. ಚೀನಾ ಮೇಲೆ ಹಲವು ಕಾರಣಗಳಿಂದ ಅವಲಂಬಿತವಾಗಿರುವ ದೇಶಗಳಲ್ಲಿ ಆರ್ಥಿಕತೆ ಕುಸಿದು ಬೀಳುವ ಆತಂಕ ಎದುರಾಗಿದೆ. ಚೀನಾದ ಜನಸಂಖ್ಯೆ ಸುಮಾರು 140 ಕೋಟಿ. ಸೋಂಕು ಹರಡುವಿಕೆ ಇದೇ ಪ್ರಮಾಣದಲ್ಲಿ ಮುಂದುವರಿದರೆ ಜನವರಿ ತಿಂಗಳ ಮಧ್ಯಭಾಗದ ಹೊತ್ತಿಗೆ ದಿನಕ್ಕೆ ಸರಾಸರಿ 37 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ ಎಂದು ಲಂಡನ್ ಮೂಲದ ಏರ್ಫಿನಿಟಿ ಲಿಮಿಟೆಡ್ನ ಸಮೀಕ್ಷೆಯು ತಿಳಿಸಿದೆ.