ಬೆಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಸಿ ಕಸದಿಂದ ತಯಾರಿಸಲಾಗುವ ಗೊಬ್ಬರವನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರಿಗೆ ಶೇ.50ರ ರಿಯಾಯಿತಿ ದರದಲ್ಲಿ ಒದಗಿಸುವ ಯೋಜನೆ ರೂಪಿಸಲಾಗಿದೆ, ಆಸಕ್ತ ರೈತರು ಮುಂಗಡ ಪಾವತಿಸಿ ರೈತ ಸಂಪರ್ಕ ಕೇಂದ್ರದಲ್ಲಿ ತಮ್ಮ ಬೇಡಿಕೆಯನ್ನು ನೋಂದಾಯಿಸಿಕೊಳ್ಳಬಹುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಕೃಷಿ ಹೊಂಡ ನಿರ್ಮಾಣ: ರಾಜ್ಯ ಸರ್ಕಾರದ ಮಹಾತ್ವಾಂಕ್ಷಿ ಯೋಜನೆಯಾದ “ಕೃಷಿಭಾಗ್ಯ” ಯೋಜನೆಯಡಿ ಕೃಷಿ ಹೊಂಡಕ್ಕೆ ರೈತರಿಂದ ಬೇಡಿಕೆ ಹೆಚ್ಚಾಗಿ ಬರುತ್ತಿರುವ ಹಿನ್ನೆಲೆಯಲ್ಲಿ, ಈ ವರ್ಷದ ಮಳೆಗಾಲದ ಆರಂಭದ ಒಳಗಾಗಿ ಇನ್ನೂ 50 ಸಾವಿರ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲು ಮುಖ್ಯಮಂತ್ರಿ ಅವರು ಒಪ್ಪಿಗೆ ನೀಡಿದ್ದು, ಇದಕ್ಕೆ ತಗಲುವ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಲು ಸಮ್ಮತಿಸಿದ್ದಾರೆ ಎಂದು ಸಚಿವರು ತಿಳಿಸಿದರು.
ಆಸಕ್ತಿಯುಳ್ಳ ರೈತರು ಸ್ಥಳೀಯ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರೈತ ಸಮುದಾಯಕ್ಕೆ ಸಚಿವರು ಮನವಿ ಮಾಡಿದರು. ರಾಜ್ಯದಲ್ಲಿ ಮಳೆ ಕೊರತೆಯಿಂದ ಅತಿಹೆಚ್ಚು ರೈತರು ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿ ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಂಡಿರುವ ಬಗ್ಗೆ ಕೆಲವು ಕೃಷಿ ವಿಶ್ವವಿದ್ಯಾಲಯಗಳು ಸಮೀಕ್ಷೆ ಮಾಡಿ ವರದಿ ಮಾಡಿದೆ ಎಂದು ಕೃಷಿ ಸಚಿವ ಬೈರೇಗೌಡ ಹೇಳಿದರು.
ಸಬ್ಸಿಡಿ ದರದಲ್ಲಿ ಸಾವಯವ ಗೊಬ್ಬರ: ಬೆಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸುಮಾರು 5 ಸಾವಿರ ಟನ್ ಸಾವಯವ ಗೊಬ್ಬರದ ದಾಸ್ತಾನು ಇದ್ದು ಇದನ್ನು ರೈತರ ಹೊಲಗಳಿಗೆ ನೇರವಾಗಿ ಪ್ರತಿ ಟನ್ನಿಗೆ ಶೇ 50 ರಷ್ಟು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಈ ಯೋಜನೆಯಡಿ ರೈತರು ಪ್ರತಿ ಟನ್ನಿಗೆ 800 ರೂ ಹಣವನ್ನು ಪಾವತಿ ಮಾಡಿದಲ್ಲಿ ಕೃಷಿ ಇಲಾಖೆಯೇ ರೈತರ ಹೊಲಕ್ಕೆ ಗೊಬ್ಬರ ಸರಬರಾಜು ಮಾಡುವುದು ಎಂದರು.