4 ವರ್ಷ ಜೈಲು ಶಿಕ್ಷೆ ಮತ್ತು 63 ಲಕ್ಷ ರೂಪಾಯಿ ದಂಡ ಸರ್ಕಾರಿ ಅಧಿಕಾರಿಗಳಿಗೆ ಎಚ್ಚರಿಕೆ

ಬುಧವಾರ, 21 ಸೆಪ್ಟಂಬರ್ 2022 (14:05 IST)
ಬೆಳಗಾವಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ. ನಿವೃತ್ತ ಸಾರಿಗೆ ಅಧಿಕಾರಿ ಪಿ. ಶಾಂತಕುಮಾರ ಶಿಕ್ಷೆಗೆ ಒಳಗಾದ ನಿವೃತ್ತ ಅಧಿಕಾರಿ. ಶಾಂತಕುಮಾರ ಪ್ರಸ್ತುತ ಬೆಳಗಾವಿ ‌ನಗರದ ಆಂಜನೇಯ ನಗರದಲ್ಲಿ ವಾಸವಾಗಿದ್ದಾರೆ. ಶಾಂತಕುಮಾರ ಮೂಲತಃ ಕೋಲಾರ ಜಿಲ್ಲೆಯ ಕೆಜಿಎಫ್‌ದವರು.
 
ಬೀದರ ಜಿಲ್ಲೆಯ ಹುಮನಾಬಾದ್ ಆರ್‌ಟಿಓ ಆಗಿದ್ದಾಗ ಭ್ರಷ್ಟಾಚಾರ ನಡೆಸಿದ್ದರು. ತಮ್ಮ ಸೇವಾ ಅವಧಿಯಲ್ಲಿ ಭ್ರಷ್ಟಾಚಾರ ಎಸಗಿ ಅಕ್ರಮ ಆಸ್ತಿ ಸಂಪಾದನೆ ಮಾಡಿಕೊಂಡಿದ್ದರು. ಈ ಸಂಬಂಧ ಗುಪ್ತ ಮಾಹಿತಿ ಕಲೆ ಹಾಕಿದ್ದ ಲೋಕಾಯುಕ್ತ ಎಸ್ಪಿ ಆರ್.ಕೆ. ಪಾಟೀಲ್‌ ಅವರು ಶಾಂತಕುಮಾರ ಮನೆಯ ಮೇಲೆ ದಾಳಿ ಮಾಡಿ, ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದರು.
 
ಲೋಕಾಯುಕ್ತ ಅಧಿಕಾರಿಗಳು 2010 ಮೇ 3 ರಂದು ಪಿ. ಶಾಂತಕುಮಾರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ತನಿಖೆ ನಡೆಸಿದ್ದ ಬೆಳಗಾವಿ ಲೋಕಾಯುಕ್ತ ಎಸ್ಪಿ ಆರ್. ಬಿ. ಹವಾಲ್ದಾರ್ ಅವರು 1.14 ಕೋಟಿ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಮೋಹನ ಪ್ರಭು ಅವರು ಸುದೀರ್ಘ ವಿಚಾರಣೆಯ ಬಳಿಕ ಇಂದು ತೀರ್ಪು ಪ್ರಕಟಿಸಿದ್ದಾರೆ. ದಂಡ ಪಾವತಿಸದಿದ್ರೆ ಆರೋಪಿ ಅಥವಾ ಪತ್ನಿಯ ಸ್ಥಿರ ಮತ್ತು ಚರಾಸ್ತಿಯನ್ನು ಮುಟ್ಟುಗೋಲು ಹಾಕಲು ಸಹ ಆದೇಶ ಹೊರಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ