ಹೈದರಾಬಾದ್ : ಸರ್ಕಾರಿ ಶಾಲೆಯ ವಸತಿ ನಿಲಯದಲ್ಲಿ ರಾತ್ರಿ ಊಟ ಸೇವಿಸಿದ ಬಳಿಕ 31 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ತೆಲಂಗಾಣದ ಕುಮಾರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಕಾಗಜನಗರ ಪಟ್ಟಣದ ಬಾಲಕರ ವಸತಿ ಶಾಲೆಯ ವಿದ್ಯಾರ್ಥಿಗಳು ಸೋಮವಾರ ರಾತ್ರಿ ಊಟ ಮಾಡಿದ ಬಳಿಕ ಹೊಟ್ಟೆನೋವು, ವಾಂತಿಭೇದಿ ಕಾಣಿಸಿಕೊಂಡಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯ ಮಾಧ್ಯಮದವರು ಶಾಲೆಗೆ ಬಂದಿದ್ದಾರೆ ಆದರೆ ಸಿಬ್ಬಂದಿ ಅವರನ್ನು ಆವರಣಕ್ಕೆ ಪ್ರವೇಶಿಸಲು ಬಿಡಲಿಲ್ಲ.
ಬಳಿಕ ವಸತಿ ನಿಲಯದ ಸಿಬ್ಬಂದಿ ಅಸ್ವಸ್ಥ ವಿದ್ಯಾರ್ಥಿಗಳನ್ನು ಹಿಂಬಾಗಿಲಿನಿಂದ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ವಿದ್ಯಾರ್ಥಿಗಳನ್ನು ತಮ್ಮ ವಾಹನಗಳಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ವಸತಿ ನಿಲಯದಲ್ಲಿ ಸಿಬ್ಬಂದಿ ಕೊರತೆಯಿರುವುದರಿಂದ ಅಡುಗೆ ಮಾಡುವ ಮುನ್ನ ಅಕ್ಕಿಯನ್ನು ತೊಳೆದಿರಲಿಲ್ಲ. ವಿದ್ಯಾರ್ಥಿಗಳಿಗೆ ನೀಡಿದ ಆಹಾರದಲ್ಲಿ ಕ್ರಿಮಿ ಕೀಟಗಳು ಕಾಣಿಸಿಕೊಂಡಿರುವ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.