ಆನೆಗೆ ಕಬ್ಬು ನೀಡಿದ್ದಕ್ಕೆ 75 ಸಾವಿರ ದಂಡ
ಆನೆಗಳಿಗೆ ಕಬ್ಬು ನೀಡಿದ್ದ ಲಾರಿ ಚಾಲಕನಿಗೆ ಬರೋಬ್ಬರಿ 75 ಸಾವಿರ ದಂಡ ಹಾಕಲಾಗಿದೆ. ದಾರಿಯಲ್ಲಿ ಅಡ್ಡಲಾಗಿ ಬರುವ ಆನೆಗೆ ಕಬ್ಬು ನೀಡಿ ಲಾರಿ ಚಾಲಕ 75 ಸಾವಿರ ದಂಡ ಹಾಕಿಸಿಕೊಂಡಿದ್ದಾನೆ. ಚಾಮರಾಜನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರು ಬಂದ ಗಜರಾಜನಿಗೆ ಲಾರಿ ಚಾಲಕ ಕಬ್ಬು ಕೊಟ್ಟಿದ್ದಾನೆ. ರಸ್ತೆ ಬದಿ ನಿಂತಿದ್ದ ಆನೆಗೆ ಕಬ್ಬಿನ ಕಂತೆಗಳನ್ನು ಎಸೆದಿದ್ದಾನೆ. ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಆಸನೂರು ಸಮೀಪ ಘಟನೆ ನಡೆದಿದೆ. ಇದನ್ನ ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು ಕಂಡಿದ್ದಾರೆ. ಇದನ್ನು ಪೊಲೀಸರಿಗೆ ತಿಳಿಸಿದ್ದಾರೆ. ಚಾಲಕನ ಪೂರ್ವಾಪರ ವಿಚಾರಿಸಿ ಖಾಕಿ ಪಡೆ ಚಾಲಕನಿಗೆ ದಂಡ ಹಾಕಿದ್ದಾರೆ. ಕಬ್ಬಿನ ರುಚಿಗಾಗಿ ಆನೆಗಳು ಲಾರಿಗಳನ್ನು ಅಡ್ಡ ಹಾಕಿ ಕಬ್ಬು ವಸೂಲಿ ಮಾಡುವುದು ಇಲ್ಲಿ ಸಾಮಾನ್ಯವಾಗಿದೆ. ಲಾರಿ ಚಾಲಕನೊಬ್ಬನಿಗೆ ಈ ಪರಿ ದಂಡ ವಿಧಿಸಿರುವುದು ಆಕ್ರೋಶಕ್ಕೂ ಕಾರಣವಾಗಿದೆ.