ಬೆಳಗಾವಿ : ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಪಲ್ಟಿಯಾಗಿ ನಾಲೆಗೆ ಬಿದ್ದ ಪರಿಣಾಮ ಸ್ಥಳದಲ್ಲೇ 9 ಮಂದಿ ಸಾವನ್ನಪ್ಪಿದ ಧಾರುಣ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಕಲ್ಯಾಳ ಬ್ರಿಡ್ಜ್ ಬಳಿ ಬೆಳ್ಳಂಬೆಳಿಗ್ಗೆ ಭೀಕರ ರಸ್ತೆ ಅಪಘಾತವಾಗಿದೆ. ಅಡಿಯಪ್ಪ ಚಿಲಭಾವಿ, ಬಸವರಾಜ್ ದಳವಿ, ಬಸವರಾಜ್ ಹನುಮನ್ನವರ್, ಆಕಾಶ್ ರಾಮಣ್ಣ ಗತ್ತಿ, ಫಕಿರಪ್ಪ ಹರಿಜನ, ಮಲಪ್ಪ ಸೇರಿ 9 ಮಂದಿ ಮೃತಪಟ್ಟಿದ್ದಾರೆ. ಮೃತರೆಲ್ಲರೂ ಗೋಕಾಕ್ ತಾಲೂಕಿನ ದಾಸನಟ್ಟಿ, ಅಕ್ಕತಂಗೇರಹಾಳ, ಎಂ ಮಲ್ಲಾಪುರ ನಿವಾಸಿಗಳಾಗಿದ್ದರು. ಇವರೆಲ್ಲರೂ ಕೂಲಿ ಕೆಲಸಕ್ಕೆಂದು ಹೊರಟಿದ್ದರು. ಆದರೆ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಪಲ್ಟಿಯಾಗಿ ಸ್ಥಳದಲ್ಲೇ 9 ಜನರ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಇಂದು ನಸುಕಿನ ಜಾವ ನಡೆದಿರುವ ಭೀಕರ ಅಪಘಾತಕ್ಕೆ ನಿದ್ರೆಯ ಮಂಪರಿನಲ್ಲಿದ್ದ ಚಾಲಕನ ನಿರ್ಲಕ್ಷ್ಯತನವೇ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಮಾರೀಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.