ಮೊದಲ ದಿನ ಕೆಲಸಕ್ಕೆ ಹೋಗುತ್ತಿದ್ದ ಮಗನನ್ನು ಅಪ್ಪ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ-ಮಗ ಇಬ್ಬರೂ ಮೃತಪಟ್ಟ ಆಘಾತಕಾರಿ ಘಟನೆ ಚಿಕ್ಕಮಗಳೂರಿನಲ್ಲಿ ಸಂಭವಿಸಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದ ಗೇಟ್ ಬಳಿ ಭಾನುವಾರ ಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ನರಸಿಂಹರಾಜ್ (56) ಹಾಗೂ ಕಿರಣ್ (23) ಮೃತಪಟ್ಟ ದುರ್ದೈವಿಗಳು. ಕಾರಿನಲ್ಲಿದ್ದ ತಾಯಿ ಭಾರತಿ (52) ಹಾಗೂ ಪ್ರೇರಣಾ (19) ಸ್ಥಿತಿ ಗಂಭೀರವಾಗಿದೆ. ಪ್ರೇರಣಾಳ ಕೈ ಹಾಗೂ ಕಾಲಿನ ಮೂಳೆ ಮುರಿದು ಹೋಗಿದೆ ಎಂದು ಹೇಳಲಾಗಿದೆ. ಅವರಿಬ್ಬರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಿರಣ್ಗೆ ಹೊಸದಾಗಿ ಕೆಲಸ ಸಿಕ್ಕಿದ್ದು, ಸೋಮವಾರ ಮೊದಲ ದಿನದ ಕೆಲಸಕ್ಕೆ ಹೋಗಬೇಕಿತ್ತು. ಈ ಹಿನ್ನೆಲೆ ನರಸಿಂಹರಾಜ್ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿ ಬೆಂಗಳೂರಿಗೆ ಹಿಂದಿರುಗುತ್ತಿದ್ದರು. ಈ ವೇಳೆ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗೇಟ್ ಬಳಿ ಈ ದುರ್ಘಟನೆ ಸಂಭವಿಸಿದೆ.
ಮೃತರು ಮೂಲತಃ ಬೆಂಗಳೂರಿನ ರಾಜಾಜಿನಗರದವರು. ನಾಳೆಯಿಂದ ಮಗ ಕೆಲಸಕ್ಕೆ ಹೋಗುತ್ತಾನೆ ಎಂದು ನರಸಿಂಹರಾಜ್ ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಬಂದಿದ್ದರು. ಪೂಜೆ ಮುಗಿಸಿಕೊಂಡು ಬೆಂಗಳೂರಿಗೆ ಹಿಂತಿರುಗುವಾಗ ಈ ದುರ್ಘಟನೆ ಸಂಭವಿಸಿದೆ.
ಕಿರಣ್ ಸ್ಥಳದಲ್ಲೇ ಮೃತಪಟ್ಟರೆ ತಂದೆ ನರಸಿಂಹರಾಜ್ ಹಾಸನದ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ಬೇಲೂರು ಬಳಿ ಅಸುನೀಗಿದ್ದಾರೆ. ಬಳಿಕ ಅವರ ಮೃತದೇಹವನ್ನು ಮೂಡಿಗೆರೆಗೆ ವಾಪಸ್ ತಂದಿದ್ದಾರೆ.
ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮೂಡಿಗೆರೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.