ರಾತ್ರಿ ಕತ್ತಲಲ್ಲಿ ಗುಂಡಿ ಗೋಚರಿಸದೆ ಬೈಕ್ ಸವಾರ ಸಾವು

ಭಾನುವಾರ, 19 ಸೆಪ್ಟಂಬರ್ 2021 (20:57 IST)
ಬೆಂಗಳೂರು: ಜಲಮಂಡಳಿ ಕಾಮಗಾರಿಗೆ ರಸ್ತೆ ಅಗೆದು ಗುಂಡಿ ತೆಗೆದಿದ್ದು, ಕಾಟಾಚಾರಕ್ಕೆ ಗುತ್ತಿಗೆದಾರರು ಬ್ಯಾರಿಕೇಡ್ ಅಳವಡಿಸಿದ್ದಾರೆ. ಪರಿಣಾಮ ರಾತ್ರಿ ಕತ್ತಲಲ್ಲಿ ಗುಂಡಿ ಗೋಚರಿಸದೆ ಬೈಕ್ ಸವಾರ ಸಾವನ್ನಪ್ಪಿದ್ದಾರೆ.
ಗುಂಡಿಗೆ ಬಿದ್ದು ದಾಸರಹಳ್ಳಿಯ ಮಲ್ಲಸಂದ್ರ ನಿವಾಸಿ ಆನಂದಪ್ಪ(47) ಸಾವನ್ನಪ್ಪಿದ್ದಾರೆ. ರಸ್ತೆ ಬದಿ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಬೈಕ್ ಸವಾರ ಗುಂಡಿಗೆ ಬೀಳುವ ದೃಶ್ಯ ಸೆರೆಯಾಗಿದೆ.
ಆನಂದಪ್ಪ ಗೌರಿಬಿದನೂರು ಮೂದವರಾಗಿದ್ದು, ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮಲ್ಲಸಂದ್ರ ನಗರದಲ್ಲಿ ವಾಸವಾಗಿದ್ದರು. ಪೀಣ್ಯಾದ ಎಲಿಕಾ ಚಿಮಣಿ ಕಂಪನಿಯಲ್ಲಿ ಮೆಕಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಶುಕ್ರವಾರ ರಾತ್ರಿ ನೈಟ್ ಶಿಫ್ಟ್ ಮುಗಿಸಿಕೊಂಡು ಮನೆಗೆ ವಾಪಾಸ್ ಆಗುವಾಗ ಬೈಕ್ ಸಮೇತ ಗುಂಡಿಗೆ ಬಿದ್ದಿದ್ದು, ಪರಿಣಾಮ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಹೆಸರಘಟ್ಟ ರಸ್ತೆಯ ಭುವನೇಶ್ವರಿ ನಗರದಲ್ಲಿ ಶುಕ್ರವಾರದ ತಡ ರಾತ್ರಿ 11.30ಕ್ಕೆ ಈ ಘಟನೆ ನಡೆದಿದೆ. ಸ್ಥಳದಲ್ಲಿ ಸುರಕ್ಷಿತ ಕ್ರಮ ಅನುಸರಿಸದೆ ನೆಪ ಮಾತ್ರಕ್ಕೆ ಚಿಕ್ಕ ಬ್ಯಾರಿಕೇಡ್ ಹಾಕಿ ನಿರ್ಲಕ್ಷ್ಯ ವಹಿಸಿದ್ದಾರೆ. ಸದ್ಯ ಗುತ್ತಿಗೆದಾರರ ನಿರ್ಲಕ್ಷ್ಯ ಅರೋಪದಡಿ ಪೀಣ್ಯಾ ಸಂಚಾರಿ ಹಾಗೂ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ