ಡಿಕೆಶಿ ಒಡೆತನದ ಸ್ಕೂಲ್​ಗೆ ಬಾಂಬ್​ ಬೆದರಿಕೆ

ಸೋಮವಾರ, 18 ಜುಲೈ 2022 (19:09 IST)
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಒಡೆತನದ ಶಾಲೆಗೆ ಬಾಂಬ್​ ಇಡೋದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಪೊಲೀಸರು, ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್​ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಈ ಶಾಲೆಯಲ್ಲಿ ಸಾವಿರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರನ್ನೆಲ್ಲ ಬೇರೆಡೆಗೆ ಸ್ಥಳಾಂತರ ಮಾಡುವ ಕಾರ್ಯ ನಡೆಯುತ್ತಿದೆ. ಆರ್​ಆರ್ ನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಡಿಕೆಶಿ ಮಾಲೀಕತ್ವದ ನ್ಯಾಶನಲ್ ಹಿಲ್​ ವ್ಯೂ ಪಬ್ಲಿಕ್ ಸ್ಕೂಲ್ ಇದೆ. ಈ ಶಾಲೆಗೆ ಬಾಂಬ್​ ಹಾಕುವುದಾಗಿ ದುಷ್ಕರ್ಮಿಗಳು ಯೂನಿಟ್​-3ಗೆ ಮೇಲ್​ ಮಾಡಿದ್ದಾರೆ. ಬೆಳಗ್ಗೆ ಸಿಬ್ಬಂದಿ ಶಾಲೆಗೆ ಬಂದಾಗ ಮೇಲ್​ ನೋಡಿ ಗಾಬರಿಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಆರ್​ಆರ್​ ನಗರ ಠಾಣೆ ಪೊಲೀಸರು ಮತ್ತು ಬಾಂಬ್​ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈಗಾಗಲೇ ಶಾಲೆಯ ಯೂನಿಟ್ 1ರಿಂದ ಯೂನಿಟ್ 2ಗೆ ಒಂದೂವರೆ ಸಾವಿರ ಮಕ್ಕಳನ್ನು ಸಿಬ್ಬಂದಿ ಶಿಫ್ಟ್ ಮಾಡಿದ್ದಾರೆ. ಶಾಲೆಗೆ ಆಗಮಿಸಿದ ಡಿಕೆಶಿ ಪುತ್ರಿ ಐಶ್ವರ್ಯಾ ಶಿವಕುಮಾರ್, ಸಿಬ್ಬಂದಿ ಮತ್ತು ಪೊಲೀಸರ ಬಳಿ ಮಾಹಿತಿ ಪಡೆದರು. ಸುದ್ದಿ ತಿಳಿಯುತ್ತಿದ್ದಂತೆ ಭಯದಲ್ಲೇ ಪೋಷಕರು ಶಾಲೆ ಮುಂದೆ ಜಮಾಯಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ