ಕಾಂಗ್ರೆಸ್ ಪಕ್ಷದ ಧ್ವನಿ ಅಡಗಿಸಲು ಬಿಜೆಪಿ ಸರ್ಕಾರ ಪ್ರಯತ್ನ- ಡಿ.ಕೆ. ಶಿವಕುಮಾರ್
ಮಂಗಳವಾರ, 21 ಜೂನ್ 2022 (20:52 IST)
ರಾಜಕೀಯ ದ್ವೇಷದಿಂದ ಸುಳ್ಳು ಪ್ರಕರಣ ದಾಖಲಿಸಿ ಕಾಂಗ್ರೆಸ್ ಪಕ್ಷದ ಧ್ವನಿ ಅಡಗಿಸಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದ್ದು, ಇದು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ, ಈ ಕೂರಿತು ದೆಹಲಿಯಲ್ಲಿ ಮಾತನಾಡಿ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಕಚೇರಿ ಮೇಲೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಮೂಲಕ ದಾಳಿ ನಡೆಸುತ್ತಿದೆ. ಪಕ್ಷದ ಕಚೇರಿ ನಮಗೆ ದೇವಾಲಯವಿದ್ದಂತೆ. ಆದರೆ ಕೇಂದ್ರ ಸರ್ಕಾರ ಪೊಲೀಸರನ್ನು ಬಳಸಿಕೊಂಡು, ಅಲ್ಲಿಗೆ ಯಾರೂ ಬರಬಾರದು, ಅಲ್ಲಿ ಯಾರೂ ಸೇರುವಂತಿಲ್ಲ ಎಂದು ದಬ್ಬಾಳಿಕೆ ನಡೆಸುತ್ತಿದೆ. ಅದನ್ನು ಖಂಡಿಸಿ ಪ್ರತಿಭಟನೆ ವ್ಯಕ್ತಪಡಿಸಲು ಇಲ್ಲಿಗೆ ಬಂದಿದ್ದೇವೆ. ಇಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದು, ಅದರ ಬಗ್ಗೆಯೂ ಅರಿವಿದೆ. ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ. ಅದೇ ರೀತಿ ಎಲ್ಲರಿಗೂ ರಾಜಕೀಯದಲ್ಲಿ ದಿನಗಳು ಬದಲಾಗುತ್ತವೆ. ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ. ಏನೇ ಆದರೂ ನಾವು ನಮ್ಮ ನಾಯಕರ ಜತೆ ಇರುತ್ತೇವೆ, ಕಷ್ಟಕಾಲದಲ್ಲಿ ಅವರ ಜತೆ ನಿಂತು, ಅವರಿಗೆ ಧೈರ್ಯ ತುಂಬುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದರು.