ತಮ್ಮನ ಶವದ ಜೊತೆ ರಸ್ತೆ ಬದಿಯಲ್ಲಿ ಬಾಲಕ
ಮಧ್ಯಪ್ರದೇಶದ ಮೊರೆನಾ ಪಟ್ಟಣದಲ್ಲಿ ಪತ್ರಕರ್ತರೊಬ್ಬರು ತೆಗೆದ ಚಿತ್ರವು ಮನಕಲಕುವಂತಿದೆ. ಇದರಲ್ಲಿ 8 ವರ್ಷದ ಬಾಲಕ ಗುಲ್ಶನ್ ತನ್ನ 2 ವರ್ಷದ ಸಹೋದರ ರಾಜನ ಶವದೊಂದಿಗೆ ಕುಳಿತಿರುವುದನ್ನು ಕಾಣಬಹುದು. ಪೂಜಾರಾಮ್ ಅಂಬಾದ ಬದ್ಫ್ರಾ ಗ್ರಾಮದ ನಿವಾಸಿ. ಸ್ಥಳೀಯ ಆಸ್ಪತ್ರೆ ಅಭಿಪ್ರಾಯದ ಮೇರೆಗೆ ತಮ್ಮ 2 ವರ್ಷದ ಮಗನನ್ನು ಆಂಬ್ಯುಲೆನ್ಸ್ನಲ್ಲಿ ಭೋಪಾಲ್ನಿಂದ 450 ಕಿಮೀ ದೂರದಲ್ಲಿರುವ ಮೊರೆನಾ ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ರಾಜ ಚಿಕಿತ್ಸೆ ವೇಳೆ ಮೃತಪಟ್ಟಿದ್ದ, ಅವರನ್ನು ಕರೆತಂದ ಆಂಬ್ಯುಲೆನ್ಸ್ ಈಗಾಗಲೇ ಹೊರಟುಬಿಟ್ಟಿತ್ತು. ಮೃತದೇಹವನ್ನು ದೂರದಲ್ಲಿರುವ ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ವಾಹನ ಬೇಕೆಂದು ಬಡ ಪೂಜಾರಾಮ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಮನವಿ ಮಾಡಿದ್ದರು. ಆದರೆ ಅವರ ಬೇಡಿಕೆಗೆ ಕಿಂಚಿತ್ತೂ ಬೆಲೆ ಸಿಗಲಿಲ್ಲ. ಯಾವುದೇ ದಾರಿ ಕಾಣದೆ ಪೂಜಾರಾಮ್ ಗ್ರಾಮಕ್ಕೆ ತೆರಳಿ ಹಣದ ವ್ಯವಸ್ಥೆ ಮಾಡಿಕೊಂಡು ಬರಲು ನಿರ್ಧರಿಸಿದ್ದಾರೆ. ಮಗ ಗುಲ್ಶನ್‌ನನ್ನು ಮೊರೆನಾದ ನೆಹರೂ ಪಾರ್ಕ್‌ನ ಮುಂದೆ ಕೂರಿಸಿ, ಮನೆಗೆ ಹೋಗಿ ಬರುವುದಾಗಿ ಹೇಳಿದ್ದಾರೆ. ಏನಾಗುತ್ತಿದೆ ಎನ್ನುವುದನ್ನೂ ಅರಿಯದ ಗುಲ್ಶನ್ ಅರ್ಧ ಗಂಟೆಯವರೆಗೆ ರಸ್ತೆ ಬದಿಯಲ್ಲೇ ತಮ್ಮನ ಮೃತದೇಹದ ಜೊತೆ ಕಾಲಕಳೆದಿದ್ದಾನೆ. ತಮ್ಮನ ದೇಹವನ್ನು ಮುದ್ದಿಸುತ್ತಾ, ನೊಣಗಳನ್ನು ಓಡಿಸುತ್ತಾ, ಕಣ್ಣೀರು ಹಾಕುತ್ತಾ ಕೂತಿದ್ದ ವಿಡಿಯೋ ಮನಕಲಕುವಂತಿದೆ.