ಮಡಿಕೇರಿ : ನಾಲ್ವರು ಮುಸ್ಲಿಂ ಯುವಕರು ಇಬ್ಬರು ಅಪ್ರಾಪ್ತ ಹಿಂದೂ ಹುಡುಗಿಯರನ್ನು ಕಾರಿನಲ್ಲಿ ಅಪಹರಿಸಿದ ಘಟನೆಯೊಂದು ಕೊಡಗಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಹುಡುಗಿಯರನ್ನು ರಕ್ಷಿಸಲಾಗಿದ್ದು, ನಾಲ್ವರು ಯುವಕರನ್ನು ಬಂಧಿಸಲಾಗಿದೆ.
ಈ ನಡುವೆ ರಕ್ಷಿಸಲ್ಪಟ್ಟವರಲ್ಲಿ ಒಬ್ಬ ಹುಡುಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಆಕೆಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಹರಣಕ್ಕೆ ಒಳಗಾದ ಹುಡುಗಿಯರು ಮಡಿಕೇರಿಯ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾರೆ. ಅಪಹರಣ ಮಾಡಿದ ಯುವಕರನ್ನು ನಿಜಾಮಿಲ್, ಸಮದ್, ತಪ್ಸಿರ್ ಹಾಗೂ ಇರ್ಫಾನ್ ಎಂದು ಗುರುತಿಸಲಾಗಿದೆ.
ಇವರು ಮಡಿಕೇರಿಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ಆರೋಪಿಗಳನ್ನು ಪೊಲೀಸರು ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಬಂಧಿಸಿದ್ದಾರೆ.
ಈ ಅಪಹರಣ ಶುಕ್ರವಾರ ಬೆಳಗ್ಗೆ ನಡೆದು ಮಧ್ಯಾಹ್ನದ ಹೊತ್ತಿಗೆ ಹುಡುಗಿಯರು ಮನೆ ಸೇರಿಯೂ ಆಗಿದೆ. ಆರೋಪಿಗಳನ್ನು ಬಂಧಿಸಿಯೂ ಆಗಿದೆ. ಅಂದರೆ ಈ ಪ್ರಕರಣದಲ್ಲಿ ಕ್ಷಣಕ್ಷಣವೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಂಭವಿಸಿದೆ. ಮಡಿಕೇರಿ ಹೊರವಲಯದ ಇಬ್ಬರು ಪಿಯು ವಿದ್ಯಾರ್ಥಿನಿಯರು ಎಂದಿನಂತೆ ಮಡಿಕೇರಿಯ ಸರ್ಕಾರಿ ಕಾಲೇಜಿಗೆ ಬರುತ್ತಿದ್ದರು. ಆಗ ಕಾರಿನಲ್ಲಿ ಬಂದ ನಾಲ್ವರು ಯುವಕರು ಅವರನ್ನು ಬಲವಂತವಾಗಿ ಕಾರಿಗೆ ಹಾಕಿಕೊಂಡು ಹೋಗಿದ್ದಾರೆ ಎಂಬ ಸುದ್ದಿ ಒಮ್ಮಿಂದೊಮ್ಮೆಗೆ ಹರಡಿತ್ತು.
ಕಾಲೇಜಿಗೆ ಹೋಗುವ ದಾರಿಯಲ್ಲೇ ಘಟನೆ ನಡೆದಿದ್ದರಿಂದ ಹಲವು ಜನರು ಹುಡುಗಿಯರು ಕಾರಿನೊಳಗೆ ಹೋಗುವುದನ್ನು ನೋಡಿದ್ದಾರೆ. ಮತ್ತು ಹುಡುಗಿಯರೂ ಪರಿಚಯದವರೇ ಆಗಿದ್ದರಿಂದ ತಕ್ಷಣವೇ ಅದರ ವಿಚಾರ ಗ್ರಾಮದೆಲ್ಲೆಡೆ ಹಬ್ಬಿತು. ಇತರ ವಿದ್ಯಾರ್ಥಿಗಳು ಕೂಡಲೆ ಕಾಲೇಜಿನ ಶಿಕ್ಷಕರಿಗೆ ತಿಳಿಸಿದ್ದಾರೆ.