ಖಾಸಗಿ ಶಾಲೆಗಳ ಅವಾಂತರದ ಬಳಿಕ ಎಚ್ಚೆತ್ತ ಶಿಕ್ಷಣ ಇಲಾಖೆ, ಖಾಸಗಿ ಶಾಲೆಗಳ ಆರಂಭಕ್ಕೆ ಅರ್ಜಿ ಸಲ್ಲಿಕೆ, ಮಾನ್ಯತೆ ನವೀಕರಣ, ನಿರಾಕ್ಷೇಪಣಾ ಪತ್ರ ನೀಡಿಕೆ ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಸೇವೆಗಳನ್ನ ಮತ್ತಷ್ಟು ಸಿಂಪಲ್ ಮಾಡಿದೆ. ಈ ಹಿಂದೆ ಪುಟಗಟ್ಟಲೇ ದಾಖಲೆಗಳನ್ನ ಇಟ್ಟುಕೊಂಡು ಇಲಾಖೆಗೆ ಬರ್ತಿದ್ದವರಿಗೆ ಇನ್ನು ಮುಂದೆ ಬೆರಳತುದಿಯಲ್ಲೇ ಎಲ್ಲಾ ಕೆಲಸ ಆಗೋ ರೀತಿ ಸರಳಗೊಳಿಸೋಕೆ ಶಿಕ್ಷಣ ಇಲಾಖೆ ಸಜ್ಜಾಗಿದೆ.
ಒಂದು ಸ್ಕೂಲ್ ಆರಂಭ ಮಾಡಬೇಕು ಅಂದ್ರೆ ಹತ್ತು-ಹಲವು ಪ್ರೊಸಿಜರ್ಗಳನ್ನ ಅನುಸರಿಸುತ್ತಿದ್ದವರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಶಿಕ್ಷಣ ಕ್ಷೇತ್ರದಲ್ಲಿ ನಡೆದ ಕೆಲ ಗೊಂದಲಗಳ ಬಳಿಕ,ಶಿಕ್ಷಣ ಇಲಾಖೆ ಡಿಜಿಟಲ್ ತಂತ್ರಜ್ಞಾನದ ಮೊರೆಹೋಗಿದೆ. ಖಾಸಗಿ ಶಾಲೆಗಳ ಆರಂಭಕ್ಕೆ ಅನುಮತಿ, ಮಾನ್ಯತೆ ನವೀಕರಣ, ನಿರಾಕ್ಷೇಪಣಾ ಪತ್ರ ನೀಡಿಕೆ ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಸೇವೆಗಳಲ್ಲಿ ಸುಧಾರಣೆ, ಸರಳೀಕರಣಕ್ಕಾಗಿ ನೂತನವಾಗಿ ಅಭಿವೃದ್ಧಿಪಡಿಸಲಾಗಿರುವ ಸಾಫ್ಟ್‌ವೇರ್ ಬಿಡುಗಡೆಯಾಗಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ ಹೊಸ ಸಾಫ್ಟ್ವೇರ್ ಲಾಂಚ್ ಮಾಡಿದ್ದಾರೆ.
ಇನ್ನು ಶಿಕ್ಷಣ ಇಲಾಖೆ ಪರಿಚಯಿಸಿರೋ ಈ ಹೊಸ ಸಾಫ್ಟ್ವೇರ್ನಿಂದ ಶಾಲೆ ಆರಂಭಕ್ಕೆ ಕಚೇರಿಯಿಂದ ಕಚೇರಿಗೆ ಅಲೆಯಬೇಕಿದ್ದ ಕೆಲಸಕ್ಕೆ ಬ್ರೇಕ್ ಬಿದ್ದಿದೆ. ಇತ್ತ ಎನ್ಒಸಿ, ಪಠ್ಯ ಕ್ರಮ ಸಂಯೋಜನೆಗೆ ಪ್ರತ್ಯೇಕವಾಗಿ ಫಾಲೋಅಪ್ ಮಾಡೋ ವ್ಯವಸ್ಥೆ ಮಾಡಲಾಗಿದ್ದು, ಅರ್ಜಿ ಯಾವ ಹಂತದಲ್ಲಿದೆ ಅನ್ನೋ ಮಾಹಿತಿಯನ್ನ ಮೆಸೇಜ್ ಮೂಲಕ ಪಡೆಯಬಹುದಾಗಿದೆ.
ಇನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರೋ ಈ ನೂತನ ಸಾಫ್ಟ್ವೇರ್ನಿಂದ ಏನೆಲ್ಲಾ ಕೆಲಸಗಳು ಸುಲಭವಾಗಿದೆ ಅನ್ನೋದನ್ನ ನೋಡೋದಾದ್ರೆ.
ಯಾವೆಲ್ಲಾ ಕೆಲಸ ಸಲೀಸು?
-ಹೊಸ ಶಾಲಾ ನೋಂದಣಿ
-ಮಾನ್ಯತೆ ನವೀಕರಣ
-ಪಠ್ಯ ಕ್ರಮ ಸಂಯೋಜನೆ
-ಮಾನ್ಯತೆ ನವೀಕರಣ 8 ಹಂತದಿಂದ 4ಕ್ಕೆ ಇಳಿಕೆ
-ಪ್ರಮಾಣ ಪತ್ರ ಕೂಡ ಡಿಜಿಟಲ್ ಮೂಲಕ ಲಭ್ಯ
ಈ ಸಾಫ್ಟ್ವೇರ್ನಿಂದ ಹೊಸ ಶಾಲೆ ನೋಂದಣಿ ಕೆಲಸ ಮತ್ತಷ್ಟು ಸಲೀಸಲಾಗಲಿದೆ. ಶಾಲೆಗಳ ಮಾನ್ಯತೆ ನವೀಕರಣ, ಪಠ್ಯಕ್ರಮ ಸಂಯೋಜನೆಗೂ ಅನುಕೂಲವಾಗಲಿದ್ದು, ಮಾನ್ಯತೆ ನವೀಕರಣದಲ್ಲಿದ್ದ 8 ಹಂತಗಳನ್ನ 4 ಹಂತಕ್ಕೆ ಇಳಿಕೆ ಮಾಡಲಾಗಿದೆ. ಇನ್ನು ಎಲ್ಲಾ ಸೇವೆಗಳ ಪ್ರಮಾಣ ಪತ್ರ ಕೂಡ ಆನ್ಲೈನ್ನಲ್ಲೇ ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿದೆ ಶಾಲೆಗಳಿಗೆ ಮಾನ್ಯತೆ ನೀಡೋ ಬಗ್ಗೆ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆಯೋಕೆ ಶಿಕ್ಷಣ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಸದ್ಯ ಈ ಕೆಲಸದಿಂದ ಅವಧಿಯ ಜೊತೆಗೆ ಕೆಲಸ ಕೂಡ ಕಡಿಮೆಯಾಗಲಿದ್ದು, ಖಾಸಗಿ ಶಾಲೆಗಳ ಕೆಲಸ-ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗಲಿದೆ. ಆದ್ರೆ ಶಿಕ್ಷಣ ಇಲಾಖೆಯ ಈ ಪ್ರಯೋಗ ಎಷ್ಟರ ಮಟ್ಟಿಗೆ ಫಲ ನೀಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ.