ಯುವತಿ ಮತ್ತು ಕಂಡಕ್ಟರ್ ನಡುವೆ ಗಲಾಟೆ

ಸೋಮವಾರ, 11 ಡಿಸೆಂಬರ್ 2023 (15:00 IST)
ಟಿಕೆಟ್ ಪಡೆದ ನಿಲ್ದಾಣ ಬರುವ ಮೊದಲೇ ಯುವತಿ ಬಸ್ ಇಳಿಯಲು ಮುಂದಾಗಿದ್ದು, ಯುವತಿ ಹಾಗೂ ಕಂಡಕ್ಟರ್ ನಡುವೆ ಗಲಾಟೆ ನಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಮಹಿಳಾ ಪ್ರಯಾಣಿಕರು ಹಾಗೂ ಕಂಡಕ್ಟರ್ ನಡುವಿನ ಜಟಾಪಟಿ ದಿನೇ ದಿನೇ ಹೆಚ್ಚುತ್ತಿದೆ. ಪ್ರಯಾಣಿಕರು ನಿಗದಿತ ಸ್ಥಳಕ್ಕೆ ಟಿಕೆಟ್ ಪಡೆದು ಸ್ಟಾಪ್ ಬರುವ ಮುನ್ನವೇ ಬಸ್ಸಿನಿಂದ ಇಳಿಯುತ್ತಿರುವ ಘಟನೆಗಳು ಹೆಚ್ಚಿದ್ದು, ಮಹಿಳಾ ಪ್ರಯಾಣಿಕರ ಈ ನಡೆಗೆ ನಿರ್ವಾಹಕರು ಸುಸ್ತಾಗಿದ್ದಾರೆ. ಅಲ್ಲದೇ ಮಹಿಳೆಯರ ನಡೆಯಿಂದ ನಿರ್ವಾಹಕರು ಈಗ ಇಕ್ಕಟ್ಟಿಗೆ ಸಿಲುಕುವಂತಾಗಿದೆ.

ಅದೇ ರೀತಿ BMTCಯಲ್ಲಿ ಯುವತಿ ಮತ್ತು ಕಂಡಕ್ಟರ್ ನಡುವೆ ಗಲಾಟೆ ನಡೆದಿದೆ. ಯುವತಿಯೋರ್ವಳು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕಾಡುಬೀಸನಹಳ್ಳಿಗೆ ಟಿಕೆಟ್ ಪಡೆದಿದ್ದು, ಟಿಕೆಟ್ ಪಡೆದ ಸ್ಟಾಪ್‌ಗೂ ಮುನ್ನ ಅಗರ ಬಳಿ ಇಳಿಯಲು ಮುಂದಾಗಿದ್ದಾಳೆ. ಯುವತಿಯ ಈ ನಡೆಗೆ ಕಂಡಕ್ಟರ್ ಗರಂ ಆಗಿದ್ದಾರೆ. ಪ್ರಶ್ನೆ ಮಾಡಿದ್ದಕ್ಕೆ ಕಂಡಕ್ಟರ್ ಜೊತೆ ಯುವತಿ ವಾಗ್ವಾದ ಮಾಡಿದ್ದಾಳೆ. ಈ ಸಂದರ್ಭ ನಿರ್ವಾಹಕ ಘಟನೆಯ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ. ಒಂದೊಮ್ಮೆ ಉಚಿತ ಟಿಕೆಟ್ ಪಡೆದ ಸ್ಥಳಕ್ಕಿಂತ ಹಿಂದೆಯೇ ಪ್ರಯಾಣಿಕರು ಇಳಿದರೆ, ಚೆಕ್ಕಿಂಗ್ ಅಧಿಕಾರಿಗಳು ಬಂದಾಗ ನಿರ್ವಾಹಕರು ದಂಡ ಕಟ್ಟಬೇಕಾಗುತ್ತದೆ. ಸದ್ಯ ಮಹಿಳಾ ಪ್ರಯಾಣಿಕರ ಈ ನಡೆಯಿಂದ ನಿರ್ವಾಹಕರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ