ಗಾರ್ಡನ್ ಸಿಟಿಗೆ ಬಂಗಾರದ ಹೊದಿಕೆ

ಶನಿವಾರ, 25 ಮಾರ್ಚ್ 2023 (17:50 IST)
ಗಾರ್ಡನ್  ಸಿಟಿಯ ತುಂಬೆಲ್ಲಾ ಈಗ ವಸಂತ ಋತುವಿನ ಸೊಬಗು. ಎಲ್ಲೆಲ್ಲೂ ಹಳದಿ, ತಿಳಿ ಗುಲಾಬಿ ಹೂ ಗಳ ರಂಗು. ಮನೆಯಿಂದ ಹೊರ ಹೋದರೆ ಸಾಕು ಕಣ್ಣಿಗೆ ಹಿತಾನುಭವ, ಅದರಲ್ಲೂ ಮುಂಜಾನೆ, ಮುಸ್ಸಂಜೆ ಹೊತ್ತಲ್ಲಿ ತಣ್ಣನೆಯ ಗಾಳಿಯ ಜೊತೆ ಈ ಪುಷ್ಪ ಸೌಂದರ್ಯ ಕಣ್ತುಂಬಿಕೊಳ್ಳೋದೆ ಚೆಂದ. ಎಲ್ಲೆಲ್ಲೂ ಮನಸೆಳೆಯುವ ಹಳದಿ ಹೂಗಳ ಚೆಲುವು. ಒಂದೆಡೆ ಪ್ರಕೃತಿದೇವಿಯು ಅರಿಶಿನ ಸೀರೆಯುಟಂತೆ ಕಾಣುವ ಪರಿ. ಮತ್ತೊಂದೆಡೆ ಮುಡಿಗೆ ತಿಳಿ ಗುಲಾಬಿ ಮುಡಿದು ಕಂಗೊಳಿಸುವ ವಸಂತ.. ಇದು ಪ್ರಸ್ತುತ ಗಾರ್ಡನ್ ಸಿಟಿ ದೃಶ್ಯ ವೈಭವ.

ಬೇಸಿಗೆ ಬಂತೆಂದರೆ ಸಾಕು ಸಿಲಿಕಾನ್ ಸಿಟಿ ಜನರ ಕಣ್ಣಿಗೆ ಹಬ್ಬವೋ ಹಬ್ಬ. ಬಿಸಿಲಿನ ಬೇಗೆಗೆ ದಣಿದ ಕಣ್ಣುಗಳಿಗೆ ತಂಪನ್ನೆರೆವ ಈ ಹಳದಿ ಟೆಬುಬಿಯಾ ಹೂ ಇಡೀ ಬೆಂಗಳೂರಿನ ತುಂಬೆಲ್ಲಾ ಅರಳಿ ನಿಂತಿದೆ. ಸಾಮಾನ್ಯವಾಗಿ ಈ ಟೆಬುಬಿಯಾ ಹೂವನ್ನು ದಿ ಗೋಲ್ಡನ್ ಟ್ರಂಪೆಟ್, ಗೋಲ್ಡನ್ ಬೆಲ್ಸ್ ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ.ವಸಂತಕಾಲದಲ್ಲಿ ಸಾಮಾನ್ಯವಾಗಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಗೋಲ್ಡನ್ ಬೆಲ್ಸ್ಗಳು  ಅರಳುತ್ತವೆ. ಸುಮಾರು 20-25 ಅಡಿ ಬೆಳೆಯುವ ಈ ಮರವು ದೊಡ್ಡದಾದ, ಕಹಳೆ-ಆಕಾರದ ಹೂವುಗಳಿಗೆ ಜನಪ್ರಿಯವಾಗಿದೆ, ಇದು ಗಾಢವಾದ ಹಳದಿ ಬಣ್ಣವನ್ನು ಹೊಂದಿರುತ್ತದೆ. ಬಹಳ ವಿಶೇಷವಾದ ಟೆಬುಬಿಯಾ  ಮರವು ಅದರ ಸೌಂದರ್ಯದ ಮೌಲ್ಯ ಮತ್ತು ಅಲಂಕಾರಿಕ ಉದ್ದೇಶಗಳಿಗಾಗಿ ಹೆಸರುವಾಸಿಯಾಗಿದೆ. ಬೆಂಗಳೂರಿನಲ್ಲಿ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಂದ ನೆಡಲ್ಪಟ್ಟ ಮರವು ಲಾಲ್ಬಾಗ್ ಗ್ಲಾಸ್ ಹೌಸ್ ಎದುರು ಕಂಡುಬರುತ್ತದೆ. 

ಇನ್ನೂ ಇಷ್ಟೆ ಅಲ್ಲದೇ ಟೆಬುಬಿಯಾವು ಹಲವು ಬಣ್ಣಗಳಿಂದ ಕೂಡಿದ್ದು,  ಬೆಂಗಳೂರಿನಲ್ಲಿ ಹಳದಿ, ಗುಲಾಬಿ, ಗಾಢ ಗುಲಾಬಿ ಬಣ್ಣ ಹೀಗೆ ಹಲವು ಬಣ್ಣಗಳಲ್ಲಿ ಕಾಣಸಿಗುತ್ತದೆ. ತಿಳಿ ಗುಲಾಬಿ ಹೂಗಳಿಂದ ಸಿಲಿಕಾನ್ ಸಿಟಿ ಇದೀಗ ಪಿಂಕ್ ಸಿಟಿಯಾಗಿ ಬದಲಾಗಿದ್ದು, ಪ್ರವಾಸಿಗರಿಗೆ ಡಬಲ್ ಖುಷಿ ನೀಡ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ