ನ.೦೨ಕ್ಕೆ ಕೊಪ್ಪದಲ್ಲಿ ಕ್ಷೇತ್ರ ಮಟ್ಟದ ಅಡಿಕೆ ಬೆಳೆಗಾರರ ಸಭೆ

ಮಂಗಳವಾರ, 25 ಅಕ್ಟೋಬರ್ 2022 (20:40 IST)
ಅಡಿಕೆ ಬೆಳೆಗೆ ವ್ಯಾಪಕವಾಗಿ ಆವರಿಸುತ್ತಿರುವ ಎಲೆ ಚುಕ್ಕಿ ರೋಗ,ಹಳದಿ ಎಲೆ ರೋಗದಿಂದ ಬೆಳೆಗಾರರು ಕಂಗಾಲಾಗಿದ್ದಾರೆ.ಸಮಸ್ಯೆಗಳ ಕುರಿತು ಕ್ಷೇತ್ರದ ಅಡಿಕೆ ಬೆಳೆಗಾರರು  ಹೋರಾಟ ನಡೆಸುವ ಪೂರ್ವಭಾವಿಯಾಗಿ ಸಂಘಟನೆ ರಚಿಸಲು ಉದ್ದೇಶಿಸಲಾಗಿದೆ ಎಂದು ಅಡಿಕೆ ಬೆಳಗಾರ ತಲವಾನೆ ಪ್ರಕಾಶ್ ತಿಳಿಸಿದರು.
 
   ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕ್ಷೇತ್ರ ಮಟ್ಟದ ಅಡಿಕೆ ಬೆಳೆಗಾರರ ಸಂಘಟನೆ ರಚನೆ  ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ೩೦ ವರ್ಷದಿಂದ   ಅಡಿಕೆಗೆ ಹಳದಿ ಎಲೆ ರೋಗ ಇನ್ನಿಲ್ಲದಂತೆ ಕಾಡಿದೆ.ಈ ನಡುವೆ ಎಲೆ ಚುಕ್ಕಿ ರೋಗ ಅಡಿಕೆಯನ್ನು ಇನ್ನಿಲ್ಲದಂತೆ ಆವರಿಸಿಕೊಂಡಿದ್ದು ಬೆಳೆಗಾರರು ಬೀದಿಗೆ ಬೀಳುವಂತಾಗಿದೆ. ಇದೂವರೆಗಿನ ಸಂಶೋಧನೆಗಳು ಯಾವುದೇ ಫಲ ನೀಡಿಲ್ಲದಿರುವುದು ವಿಷಾದನೀಯ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಎಲ್ಲಾ ರೈತರು ಸಂಘಟಿತರಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದರು.
 
   ಬೆಳೆಗಾರ ಕುಕ್ಕೊಡಿಗೆ ರವೀಂದ್ರ ಮಾತನಾಡಿ, ಸಮಸ್ಯೆಗಳ ಕುರಿತು ಹೋರಾಟ ನಡೆಸಲು ಪಕ್ಷಾತೀತ ಸಂಘಟನೆಯೊಂದರ ಅವಶ್ಯಕತೆ ಇದೆ.ಇದು ಯಾರ ವಿರುದ್ದವೂ ಅಲ್ಲ.ಬೆಳೆಗಾರರು ಸಂಘಟಿತರಾಗಿ ನಮ್ಮ ಸ್ಪಷ್ಟ ಬೇಡಿಕೆಗಳನ್ನು ಸರ್ಕಾರದ ಮುಂದಿಡಬೇಕು.ಈ ನಿಟ್ಟಿನಲ್ಲಿ ಕೊಪ್ಪ,ನರಸಿಂಹರಾಜಪುರ,ಶೃಂಗೇರಿ ಒಳಗೊಂಡ ಮೂರು ತಾಲ್ಲೂಕಿನ ರೈತರ ಸಭೆಯನ್ನು ನ.೨ ರಂದು ಬೆಳಿಗ್ಗೆ ೧೦ ಗಂಟೆಗೆ ಕೊಪ್ಪದ ಟೌನ್ ಹಾಲ್ ನಲ್ಲಿ ಕರೆಯಲು ತೀರ್ಮಾನಿಸಲಾಗಿದೆ. ಎಲ್ಲಾ ಪಕ್ಷದ ಮುಖಂಡರು, ಬೆಳೆಗಾರರು, ಸಂಘಟಕರು ಆಗಮಿಸಿ ಸಲಹೆ ಸೂಚನೆ ನೀಡುವಂತೆ ಕೋರಿದರು.
 
      ಕೊಪ್ಪದ ಲೆಕ್ಕಪರಿಶೋಧಕ ಹರ್ಷ, ಬಿಳಾಲುಕೊಪ್ಪ ಭಾಸ್ಕರ್ ರಾವ್, ಅಲಗೇಶ್ವರ ಸಚಿನ್, ನಾರಾಯಣ ಬೆಂಡೆಹಕ್ಲು, ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್, ಅರುಣ್ ಹೊಸೂರು, ಸುಹಾಸ್ ಹುಲ್ಸೆ, ದಿವಾಕರ ಹೆಗ್ಗದ್ದೆ ಇದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ