ಜೈಲಿನಲ್ಲಿರುವ ಶಶಿಕಲಾಗೆ ವಿಐಪಿ ಸೌಕರ್ಯ ಒದಗಿಸುತ್ತಿರುವ ವಿಚಾರ ತನಿಖಾ ವರದಿಯಿಂದ ಬಹಿರಂಗ

ಸೋಮವಾರ, 21 ಜನವರಿ 2019 (14:18 IST)
ಬೆಂಗಳೂರು : ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎಐಡಿಎಂಕೆ ನಾಯಕಿ ವಿ.ಶಶಿಕಲಾ ಅವರಿಗೆ  ವಿಐಪಿ ಸೌಕರ್ಯ ಒದಗಿಸುತ್ತಿರುವುದು ನಿಜ ಎಂಬ ವಿಚಾರ ಇದೀಗ ಬಹಿರಂಗವಾಗಿದೆ.


ಈ ಕುರಿತು ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ಕುಮಾರ್‌ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ. ಶಶಿಕಲಾಗೆ ಒಂದು ಕೊಠಡಿ ನೀಡುವಂತೆ ಕೋರ್ಟ್ ಆದೇಶಿಸಿದ್ದರೂ ಕೂಡ  ಶಶಿಕಲಾ ಹಾಗೂ ಅವರ ಸಂಬಂಧಿ ಇಳವರಸಿ ಶಿಕ್ಷೆಗೆ ಗುರಿಯಾಗಿದ ದಿನದಿಂದಲೂ "ಎ ದರ್ಜೆ' ಸೌಲಭ್ಯ ನೀಡಲಾಗಿದ್ದು, ಅಡುಗೆ ಮಾಡಲು ಪ್ರತ್ಯೇಕ ಕೊಠಡಿ ಸೇರಿದಂತೆ ಐದು ಕೊಠಡಿಯನ್ನು ಒದಗಿಸಲಾಗಿತ್ತು ಎಂದು ಹೇಳಲಾಗಿತ್ತು.


ಜೈಲು ಅಕ್ರಮದ ಕುರಿತು ತನಿಖೆಗೆ ರಾಜ್ಯ ಸರ್ಕಾರ ರಚಿಸಿದ್ದ ವಿನಯ್‌ ಕುಮಾರ್‌ ನೇತೃತ್ವದ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಶಶಿಕಲಾ ಹಾಗೂ ಅವರ ಸಂಬಂಧಿ ಜೆ.ಇಳವರಸಿ ಅವರ ಖಾಸಗಿ ಬಳಕೆಗೆ ಮಹಿಳಾ ಬ್ಯಾರಕ್‌ನ ಮೊದಲ ಮಹಡಿಯಲ್ಲಿ ಐದು ಕೊಠಡಿಯುಳ್ಳ ಕಾರಿಡಾರನ್ನೇ ನೀಡಲಾಗಿತ್ತು. ಐದರಲ್ಲಿ ಒಂದನ್ನು ಶಶಿಕಲಾ ಅಧಿಕೃತವಾಗಿ ಬಳಕೆ ಮಾಡುತ್ತಿದ್ದರೆ, ನಾಲ್ಕು ಕೊಠಡಿಗಳನ್ನು ಯಾರಿಗೂ ಜೈಲು ಅಧಿಕಾರಿಗಳು ನೀಡಿರಲಿಲ್ಲ.


ಶಶಿಕಲಾ ಅವರ ಭೇಟಿಗೆ ಬರುವ ಸಂಬಂಧಿಕರು ಹಾಗೂ ಸ್ನೇಹಿತರೊಂದಿಗೆ ಮಾತನಾಡಲು ಒಂದು ಕೊಠಡಿಯನ್ನು ಬಳಸಲಾಗುತ್ತಿತ್ತು. ಅಲ್ಲದೆ, ಇವರ ಕೊಠಡಿಯಲ್ಲಿ ಮಂಚ, ಹೊದಿಕೆ ಹಾಗೂ ಪ್ರಸಿದ್ಧ ಕಂಪನಿಯ ಎಲ್‌ಇಡಿ ಟಿ.ವಿ. ಇಡಲಾಗಿತ್ತು. ಇಂತಹ ಸೌಲಭ್ಯ ಬೇರೆ ಯಾವುದೇ ಬ್ಯಾರಕ್‌ನಲ್ಲಿ ಕೈದಿಗಳಿಗೆ ನೀಡಿಲ್ಲ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ