ಉತ್ತರ ಒಳನಾಡು ಪ್ರದೇಶಗಳಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ರಾಜ್ಯಾದ್ಯಂತ ಎರಡು ದಿನ ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಹೆಚ್ಚಿದೆ. ಸ್ವಲ್ಪ ಸಮಯ ಮಳೆ ಕಡಿಮೆಯಾಗಿ, ಸ್ವಲ್ಪ ಸಮಯ ಮಳೆ ಜಾಸ್ತಿ ಆಗಬಹುದು. ಬೆಂಗಳೂರಿನಲ್ಲಿ ಇಡೀ ರಾತ್ರಿ ತುಂತುರು ಮಳೆ ಆಗಿದೆ. ಇದೇ ರೀತಿ ಇನ್ನು ಎರಡು ದಿನ ಮಳೆ ಆಗುವ ಸಂಭವ ಇದೆ ಅಂತ ಹಿರಿಯ ವಿಜ್ಞಾನಿ ಗವಾಸ್ಕರ್ ತಿಳಿಸಿದ್ದಾರೆ.
ಜನಜೀವನ ಅಸ್ತವ್ಯಸ್ತ:
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಣಕಲ್, ಬಾಳೂರು, ಮಧುಗುಂಡಿ, ನಿಡುವಳೆ ಸೇರಿ ವಿವಿಧೆಡೆ ಅಬ್ಬರದ ಮಳೆ ಸುರಿಯುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯಿಂದ ಕಾಫಿ ಹಣ್ಣು ಉದುರಲು ಆರಂಭಿಸಿದ್ದು, ಬೆಳೆಗಾರರು ಚಿಂತೆಗೊಳಗಿದ್ದಾರೆ.