ಮಕ್ಕಳನ್ನು ಖರೀದಿಸಿ ತಮಿಳುನಾಡು ಸೇರಿದಂತೆ ವಿವಿಧೆಡೆಗಳಲ್ಲಿ ಮಾರಾಟ

ಬುಧವಾರ, 6 ಅಕ್ಟೋಬರ್ 2021 (21:11 IST)
ಬೆಂಗಳೂರು: ಹಣದಾಸೆ ತೋರಿಸಿ ಬಡ ಪೋಷಕರನ್ನು ಪುಸಲಾಯಿಸಿ ಮಕ್ಕಳನ್ನು ಖರೀದಿಸಿ ತಮಿಳುನಾಡು ಸೇರಿದಂತೆ ವಿವಿಧೆಡೆಗಳಲ್ಲಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ನಗರ ದಕ್ಷಿಣ ವಿಭಾಗದ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕಳೆದ ವರ್ಷ ಚಾಮರಾಜಪೇಟೆ ಸರ್ಕಾರಿ ಹೆರಿಗೆ ಅಸ್ಪತ್ರೆಯೊಂದರಲ್ಲಿ ಮಗು ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸ್ ತನಿಖೆಯ ಮುಂದುವರೆದ ಭಾಗವಾಗಿ ಮಕ್ಕಳ ಮಾರಾಟ ದಂಧೆಯಲ್ಲಿ ತೊಡಗಿದ್ದ ಐವರನ್ನು ಬಂಧಿಸಿ 11 ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಆದೇಶದಂತೆ ಪೋಷಕರಿಗೆ ಹಸ್ತಾಂತರಿಸಿದ್ದಾರೆ.
ಈ ದಂಧೆಯಲ್ಲಿ ಭಾಗಿಯಾಗಿದ್ದ ದೇವಿ ಷಣ್ಮುಗಂ, ಮಹೇಶ್ ಕುಮಾರ್, ರಂಜನಾ ದೇವಿಪ್ರಸಾದ್, ಜನಾರ್ಧನ್, ಧನಲಕ್ಷ್ಮೀ ಎಂಬುವರನ್ನು ಬಂಧಿಸಲಾಗಿದೆ‌. ಪ್ರಕರಣದ ಕಿಂಗ್ ಪಿನ್ ರತ್ನಾ ಎಂಬಾಕೆ ಕಳೆದ ಮೇ ತಿಂಗಳಲ್ಲಿ ಕೊರೊನಾಗೆ ಬಲಿಯಾಗಿದ್ದಳು.
ತನಿಖೆ ಹೇಗಾಯಿತು?: 
ಮಗು ಕಳ್ಳತನ‌ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದ ಪೊಲೀಸರು ಮಕ್ಕಳ ಮಾರಾಟ ದಂಧೆ ಬಗ್ಗೆ ಅರಿಯಲು ಆಸ್ಪತ್ರೆ ಹಾಗೂ‌ ಅದರ ಸುತ್ತಮುತ್ತಲು ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ಮೇಲೆ ನಿಗಾ ವಹಿಸಿದ್ದರು. ಈ ವೇಳೆ ಕೆಲವರನ್ನು ವಶಕ್ಕೆ‌ ಪಡೆದು ವಿಚಾರಣೆ ನಡೆಸಿದಾಗ ಆರೋಪಿತರ ಬಗ್ಗೆ ಬಾಯ್ಬಿಟ್ಟಿದ್ದಾರೆ. ಖಚಿತ ಮಾಹಿತಿ ಆಧರಿಸಿ ರತ್ನ ಹಾಗೂ ದೇವಿ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದರು‌.‌ ಆ ವೇಳೆ ರತ್ನಾಳ ಮನೆಯಲ್ಲಿ ಪರಿಶೀಲನೆ ನಡೆಸಿದಾಗ 28 ನಕಲಿ ತಾಯಿ ಕಾರ್ಡ್​ಗಳು ಪತ್ತೆಯಾಗಿದ್ದವು. ಇದರ ಬಗ್ಗೆ ತೀವ್ರ ವಿಚಾರಣೆ ನಡೆಸಿದಾಗ ಮಕ್ಕಳ ಮಾರಾಟ ದಂಧೆಯಲ್ಲಿ ತೊಡಗಿರುವ ವಿಷಯ ಬಯಲಾಗಿತ್ತು.
ಬಡವರ ಮಕ್ಕಳೇ ದಂಧೆಕೋರರ ಟಾರ್ಗೆಟ್: ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆ ಎಡತಾಕುತ್ತಿದ್ದ ಆರೋಪಿಗಳು ಹೆರಿಗೆಗಾಗಿ ದಾಖಲಾಗಿದ್ದ ಬಡ ಮಹಿಳೆಯರನ್ನು ಪರಿಚಯಿಸಿಕೊಂಡು ಮೊಬೈಲ್ ನಂಬರ್ ಪಡೆಯುತ್ತಿದ್ದರು. ಡಿಸ್ಚಾರ್ಚ್ ಆದ ಬಳಿಕ ಮತ್ತೆ ಫೋನ್ ಮಾಡಿ ಅವರ ಮನೆಗಳಿಗೆ ಹೋಗಿ ಅವರ ಆರೋಗ್ಯ ವಿಚಾರಿಸುವ ಸೋಗಿನಲ್ಲಿ ಮಾತನಾಡಿ ಬಳಿಕ ಹಣದಾಸೆ ತೋರಿಸಿ ಅವರಿಂದ ಮಕ್ಕಳನ್ನು ಖರೀದಿಸುತ್ತಿದ್ದರು. ಬಡತನದ ಅನಿವಾರ್ಯ ಕಾರಣಗಳಿಂದಾಗಿ ಕೆಲ ಪೋಷಕರು ಮಕ್ಕಳನ್ನು ಮಾರಾಟ ಮಾಡುತ್ತಿದ್ದರು. ಇನ್ನೂ ಕೆಲವೆಡೆ ಆರೋಪಿಗಳು ಮಕ್ಕಳನ್ನು ಕದಿಯುತ್ತಿದ್ದರು ಎನ್ನಲಾಗಿದೆ.
18ಕ್ಕೂ ಹೆಚ್ಚು ಮಕ್ಕಳ ಮಾರಾಟ:
ಮಕ್ಕಳಿಲ್ಲದ‌ ದಂಪತಿಗೆ ಬಾಂಬೆಯಿಂದ‌ ಮಕ್ಕಳನ್ನು ತಂದು ಮಾರಾಟ ಮಾಡಿ ಆರೋಪಿಗಳು ಹಣ ಸಂಪಾದಿಸುತ್ತಿದ್ದರು. ಬೆಂಗಳೂರಿನಿಂದ ತಮಿಳುನಾಡಿಗೂ ಮಗು ಮಾರಾಟ ಮಾಡುತ್ತಿದ್ದರು. ಸದ್ಯ ಆರೋಪಿಗಳು 18ಕ್ಕೂ ಹೆಚ್ಚು ಮಕ್ಕಳ ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಸದ್ಯ 11 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ‌.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ