ಮೆಟ್ರೋದಲ್ಲಿ ಮೋಜಿಗಾಗಿ ಎಮರ್ಜೆನ್ಸಿ ಬಟನ್ ಒತ್ತಿ 5 ಸಾವಿರ ದಂಡ ಕಟ್ಟಿದ ಯುವಕ

Sampriya

ಗುರುವಾರ, 12 ಸೆಪ್ಟಂಬರ್ 2024 (17:54 IST)
Photo Courtesy X
ಬೆಂಗಳೂರು: ಮೋಜಿಗಾಗಿ ನಮ್ಮ ಮೆಟ್ರೊ ತುರ್ತು ಟ್ರಿಪ್ ಸಿಸ್ಟಂ (ಇಟಿಎಸ್‌) ಬಟನ್‌ ಒತ್ತಿದ ಯುವಕನಿಗೆ ಬಿಎಂಆರ್‌ಸಿಎಲ್ ₹5ಸಾವಿರ ದಂಡ ವಿಧಿಸಿದ್ದಾರೆ. ಮೆಟ್ರೋ ಸಂಚಾರಕ್ಕೆ ತೊಡಕುಂಟು ಮಾಡಿದ್ದಕ್ಕೆ ಯುವಕನಿಗೆ ಭಾರೀ ದಂಡ ವಿಧಿಸಿದೆ.

ಮಂಗಳವಾರ ನೇರಳೆ ಮಾರ್ಗದಲ್ಲಿ ಎಂ.ಜಿ.ರೋಡ್‌ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಮೋಜಿಗಾಗಿ ಇಟಿಎಸ್‌ ಬಟನ್‌ ಒತ್ತಿದ್ದಾನೆ. ಇದರಿಂದ ಟ್ರಿನಿಟಿ ನಿಲ್ದಾಣ ಕಡೆಯಿಂದ ಬರುತ್ತಿದ್ದ ರೈಲು ಎಂ.ಜಿ. ರೋಡ್‌ ನಿಲ್ದಾಣದಲ್ಲಿ ಸುಮಾರು 10 ನಿಮಿಷ ನಿಲ್ಲಬೇಕಾಯಿತು. ಆದರೆ, ಯಾರಿಗೆ ಏನು ತೊಂದರೆಯಾಗಿದೆ ಎಂದು ಗೊತ್ತಾಗಿರಲಿಲ್ಲ. ಮೆಟ್ರೊ ರೈಲು ಸಂಚಾರ ಮಾತ್ರ ಅಸ್ತ್ರವ್ಯಸ್ತಗೊಂಡಿತ್ತು.

ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿ ಬಟನ್ ಒತ್ತಿದ ಯುವಕನನ್ನು ಗುರುತಿಸಲಾಯಿತು.  ಮೆಟ್ರೊ ರೈಲು ಪುನರಾರಂಭಗೊಂಡಾಗ ಇಟಿಎಸ್‌ ಒತ್ತಿದ್ದ ವ್ಯಕ್ತಿ ರೈಲು ಹತ್ತಿದ್ದು, ಕಬ್ಬನ್‌ ಪಾರ್ಕ್‌ ನಿಲ್ದಾಣದಲ್ಲಿ ಇಳಿದರು. ಅವರನ್ನು ಮೆಟ್ರೊ ಸಿಬ್ಬಂದಿ ಹಿಂಬಾಲಿಸಿ ಹೋಗಿ ವಶಕ್ಕೆ ಪಡೆದು ವಿಚಾರಿಸಿದಾಗ 21 ವರ್ಷದ ಹೇಮಂತ್‌ ಎಂಬ ಆ ಯುವಕ ಮೋಜಿಗಾಗಿ ಬಟನ್‌ ಒತ್ತಿರುವುದಾಗಿ ತಿಳಿದು ಬಂದಿದೆ.

ಮೆಟ್ರೊ ಹಳಿಯಲ್ಲಿ ಯಾರಾದರೂ ಆಕಸ್ಮಿಕವಾಗಿ ಜಾರಿ ಬಿದ್ದಾಗ ಅಥವಾ ಜಿಗಿದಾಗ ನಿಲ್ದಾಣದಲ್ಲಿರುವ ಇಟಿಎಸ್‌ ಬಟನ್‌ ಅನ್ನು ಬಳಸಲಾಗುತ್ತದೆ. ಬಟನ್‌ ಒತ್ತಿದ ಕೂಡಲೇ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿ ಮೆಟ್ರೊ ಸಂಚಾರವನ್ನು ಸ್ಥಗಿತಗೊಳಿಸುವ ವ್ಯವಸ್ಥೆ ಇದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ