ಬೆಂಗಳೂರು ನಿವಾಸಿಗಳಿಗೆ ಗುಡ್‌ನ್ಯೂಸ್‌: ನ.1ರಿಂದಲೇ ಬಿಖಾತಾದಿಂದ ಎ ಖಾತಾ ಪರಿವರ್ತನೆ ಅಭಿಯಾನ

Sampriya

ಬುಧವಾರ, 15 ಅಕ್ಟೋಬರ್ 2025 (22:03 IST)
ಬೆಂಗಳೂರು: ರಾಜಧಾನಿ ಬೆಂಗಳೂರು ನಿವಾಸಿಗಳಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ನವೆಂಬರ್‌ 1ರಿಂದಲೇ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೆ ಎ-ಖಾತಾ ಪಡೆಯಲು ಆನ್‌ಲೈನ್ ವ್ಯವಸ್ಥೆಗೆ ಬುಧವಾರ ಚಾಲನೆ ನೀಡಿದೆ.

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದು ವಿಧಾನಸೌಧದಲ್ಲಿ ಬಿ ಖಾತಾದಿಂದ ಎ-ಖಾತಾ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೆ ಎ-ಖಾತಾವನ್ನು ಆನ್‌ಲೈನ್‌ನಲ್ಲೇ ಪಡೆಯುವುದಕ್ಕೆ ಚಾಲನೆ ನೀಡಿದರು.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬೆಂಗಳೂರಿನ ನಾಗರಿಕರಿಗೆ ಅನುಕೂಲವಾಗಲು ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ ಎಂದು ಶಿವಕುಮಾರ್‌ ಹೇಳಿದರು.

ನವೆಂಬರ್ 1ರಿಂದ ಬಿ ಖಾತೆಗಳನ್ನು ಎ ಖಾತೆಗಳಾಗಿ ಬದಲಾವಣೆ ಮಾಡುವ ಅಭಿಯಾನ ಕೈಗೊಳ್ಳಲಾಗುವುದು. ಇದು ಬೆಂಗಳೂರಿನ 15 ಲಕ್ಷ ಆಸ್ತಿಗಳ ಮಾಲೀಕರಿಗೆ ಉಪಯೋಗವಾಗುತ್ತದೆ. ಇದೊಂದು ಕ್ರಾಂತಿಕಾರಕ ತೀರ್ಮಾನ.‌ ಆಸ್ತಿ ಶುದ್ಧೀಕರಣಕ್ಕೆ ನಾಂದಿ ಎಂದು ಅವರು ಹೇಳಿದರು.

ನವೆಂಬರ್ 1 ರಿಂದ ಪ್ರಾರಂಭವಾಗುವ ಈ ಅಭಿಯಾನ 100 ದಿನಗಳ ನಡೆಯಲಿದೆ. 500 ರೂಪಾಯಿ ಅರ್ಜಿ ಶುಲ್ಕವನ್ನು ಕಟ್ಟಿ ಆನ್ ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡರೆ ಪಾಲಿಕೆ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಸೇವೆ ನೀಡುತ್ತಾರೆ ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿದರು.

ಆಸ್ತಿ ಮಾಲೀಕರು ಸದರಿ ಆಸ್ತಿಯ ಮಾರ್ಗಸೂಚಿ ದರದ ಶೇ. 5 ರಷ್ಟನ್ನು ಶುಲ್ಕವಾಗಿ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಇಂತಹ ಬಡಾವಣೆಗಳಿಗೆ ವಿದ್ಯುತ್, ನೀರು, ಒಳಚರಂಡಿ ಸೇರಿದಂತೆ ಇತರೇ ಮೂಲಸೌಕರ್ಯ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಈ ದೃಷ್ಟಿಯಿಂದ ಗೈಡೆನ್ಸ್ ದರದ ಶೇ 5 ರಷ್ಟು ‌ಮಾತ್ರ ಶುಲ್ಕ ವಿಧಿಸಲಾಗಿದೆ.‌ 100 ದಿನದ ನಂತರ ಹೆಚ್ಚುವರಿ ಶುಲ್ಕ ನಿಗದಿ ಮಾಡಲಾಗುತ್ತದೆ ಎಂದು ತಿಳಿಸಿದರು.

2000 ಚ.ಮೀ.ಗಳವರೆಗಿನ ನಿವೇಶನಗಳಿಗೆ ttps://bbmp.karnataka.gov.in/BtoAKhata ವೆಬ್‌ಸೈಟ್‌ನಲ್ಲಿ ಹಾಗೂ 2000 ಚ.ಮೀ.ಗೂ ಹೆಚ್ಚಿನ ನಿವೇಶನಗಳಿಗೆ ttps://bpas.bbmp.gov.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ