ವಿಜಯಪುರ : ಇತ್ತಿಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಸದುಪಯೋಗದ ಬದಲು ದುರುಪಯೋಗವೇ ಹೆಚ್ಚಾಗುತ್ತಿದೆ.
ಇನ್ನು ಕೆಲವರಂತು ಇದನ್ನೇ ಬಂಡವಾಳ ಮಾಡಿಕೊಂಡು ಹೊಸ ಹೊಸ ವಿನೂತನ ಹಣ ದೋಚಿ ಪರಾರಿಯಾಗುವ ಸುದ್ದಿಗಳು ಬಂದಿವೆ. ಇಷ್ಟಾದ್ರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ.
ಬೆಳದಿಂಗಳ ಬಾಲೆಯ ಬಲೆಗೆ ಬಿದ್ದು ಅಮಾಯಕನೋರ್ವ ಲಕ್ಷ ಲಕ್ಷ ಕಳೆದುಕೊಂಡು ಕಂಗಾಲಾದಿದ್ದಾನೆ. ಮೂಲತಃ ವಿಜಯಪುರ ಜಿಲ್ಲೆಯ ಅಲಮೇಲ ತಾಲೂಕಿನ ಬಗಲೂರ ಗ್ರಾಮದ ಪರಮೇಶ್ವರ್ ಹಿಪ್ಪರಗಿ. ಇವರು ಸದ್ಯ ತೆಲಾಂಗಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿ.
ತನ್ನ ಸ್ವಗ್ರಾಮದಲ್ಲಿದ್ದಾಗ ಕಳೆದ ಜೂನ್ 29 ರಂದು ಮಂಜುಳಾ ಕೆ.ಆರ್ ಎಂಬ ಫೇಸ್ ಬುಕ್ ಅಕೌಂಟ್ನಿಂದ ಫ್ರೇಂಡ್ ರಿಕ್ವೆಸ್ಟ್ ಬಂದಿದೆ. ಅದನ್ನ ಪರಮೇಶ್ವರ್ ಕನ್ ಫರ್ಮ ಮಾಡ್ತಿದಂತೆ ಆ ಕಡೆಯಿಂದ ಯುವತಿ ಮೆಸೆಂಜರ್ನಲ್ಲಿ ಹಾಯ್ ಅಂತಾ ಸಂದೇಶ ಕಳಿಸಿ ಪರಮೇಶ್ವರನನ್ನ ಖೆಡ್ಡಾಕ್ಕೆ ಕೆಡವಿದ್ದಾಳೆ. ನಂತರ ಪ್ರತಿ ದಿನ ಮೆಸೇಜ್ ಮಾಡುವ ಮೂಲಕ ಅಜ್ಞಾತ ಸಖಿಯೊಂದಿಗೆ ಪರಮೇಶ್ವರ್ ಸಲುಗೆ ಬೆಳಸಿಕೊಂಡಿದ್ದಾನೆ.
ಅಕ್ಟೋಬರ್ 14 ರಂದು ತಾಯಿ ಆರೋಗ್ಯ ಸರಿಯಿಲ್ಲ 700 ರೂ ಫೋನ್ ಪೇ ಮಾಡಲು ಸಂದೇಶ ಬಂದಿದೆ. ಆಗ ಪರಮೇಶ್ವರ 2000 ರೂ ಹಾಕಿದ್ದಾನೆ. ನಂತರ ಒಂದು ವಾರದ ಕಳೆದ ಮೇಲೆ ತಾಯಿ ಮೃತಳಾಗಿದ್ದಾಳೆ ಅಂತಾ 2000 ರೂ. ಕಳಿಸಲು ಸಂದೇಶ ಬಂದಿದೆ. ಆಗಲೂ ಕೂಡ ಪರಮೇಶ್ವರ್ 2000 ರೂ ಹಾಕಿದ್ದಾನೆ. ಅದೇ ರೀತಿ ಬೆಳದಿಂಗಳ ಬಾಲೆ ಕೇಳಿದಷ್ಟು, ಕೇಳಿದಾಗೆಲ್ಲ ಪರಮೇಶ್ವರ ಹಣ ಹಾಕಿದ್ದಾನೆ. ಕೆಲ ದಿನಗಳ ನಂತರ ಮಂಜುಳಾ ಕರೆ ಮಾಡಿ ಪರಮೇಶ್ವರ್ಗೆ ತಾನು ಐಎಎಸ್ ಪರೀಕ್ಷೆ ಪಾಸ್ ಆಗಿದ್ದೇನೆ.
ಡಿಸಿ ಪೋಸ್ಟ್ ಸಿಗುತ್ತದೆ. ಸದ್ಯ ಹಾಸನದಲ್ಲಿದ್ದೇನೆ ನನ್ನನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಬೆಂಗಳೂರಿಗೆ ಹೋಗಬೇಕಿದ್ದು, ಖರ್ಚಿಗೆ ಹಣವಿಲ್ಲ. ಹಣಕಾಸಿನ ಸಹಾಯ ಮಾಡಿದ್ರೆ ಮದುವೆ ಆಗುತ್ತೇನೆ ಅಂತಾ ಬುರುಡೆ ಬಿಟ್ಟಿದ್ದಾಳೆ.
ಇದನ್ನ ನಂಬಿ ದುರಾಸೆಗೆ ಬಿದ್ದ ಪರಮೇಶ್ವರ್ 50 ಸಾವಿರ ರೂ ಹಾಕಿದ್ದಾನೆ. ಮತ್ತೆ ಕೆಲ ದಿನಗಳ ನಂತರ ಮತ್ತಷ್ಟು ಸಲುಗೆಯಿಂದ, ಪ್ರೀತಿಯಿಂದ ಮಾತನಾಡಿ ಹಂತ, ಹಂತವಾಗಿ ಅಷ್ಟಿಷ್ಟಲ್ಲ ಬರೋಬ್ಬರಿ 41.26 ಲಕ್ಷ ಪೀಕಿದ್ದಾಳೆ.