ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿ ಅಹವಾಲು ಸಲ್ಲಿಸಲು ಯತ್ನಿಸಿದ ಮಹಿಳೆಯನ್ನು ನಿಂದಿಸಿದ್ದಲ್ಲದೇ, ಆಕೆಯನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಅರವಿಂದ್ ಲಿಂಬಾವಳಿ ವಿರುದ್ಧ ಆಮ್ ಆದ್ಮಿ ಪಾರ್ಟಿಯು ಮಹಿಳಾ ಆಯೋಗಕ್ಕೆ ದೂರು ನೀಡಿತು. “ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿಯವರ ದರ್ಪ ಮಿತಿಮೀರಿದೆ. ರಾಜಕಾಲುವೆ ಒತ್ತುವರಿ ಸಂಬಂಧ ದೂರು ನೀಡಲು ಆಗಮಿಸಿದ ಮಹಿಳೆಯನ್ನು ಲಿಂಬಾವಳಿ ನಿಂದಿಸಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಪೊಲೀಸರ ಮೇಲೆ ಪ್ರಭಾವ ಮೀರಿ ಆಕೆಯ ಬಂಧನವಾಗುವಂತೆ ಮಾಡಿದ್ದಾರೆ. ಜನರ ಸಮಸ್ಯೆಯನ್ನು ಆಲಿಸುವ ಸೌಜನ್ಯವಿಲ್ಲದ ಲಿಂಬಾವಳಿಯವರು ಶಾಸಕರಾಗಿರುವುದು ಕ್ಷೇತ್ರದ ದುರಾದೃಷ್ಟ ಎಂದು ಹೇಳಿದರು. ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ ಲಿಂಬಾವಳಿ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು. ಅರವಿಂದ್ ಲಿಂಬಾವಳಿಯವರು ಸಮಸ್ತ ಮಹಿಳೆಯರ ಕ್ಷಮೆ ಕೇಳಬೇಕು”ಎಂದು ಬೆಂಗಳೂರು ನಗರ ಎಎಪಿ ಮಹಿಳಾ ಘಟಕದ ಅಧ್ಯಕ್ಷೆ ಆಗ್ರಹಿಸಿದ್ರು.