ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಕೊಪ್ಪಳ ಜಿಲ್ಲೆಯಲ್ಲಿ ಶೇ. 70. 06 ರಷ್ಟು ಮತದಾನ

ಶುಕ್ರವಾರ, 31 ಆಗಸ್ಟ್ 2018 (19:35 IST)
ಕೊಪ್ಪಳ ಜಿಲ್ಲಾ ವ್ಯಾಪ್ತಿಯ 04 ನಗರ, ಸ್ಥಳೀಯ ಸಂಸ್ಥೆಗಳಿಗೆ ಆ. 31 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು ಶೇ. 70. 06 ರಷ್ಟು ಮತದಾನವಾಗಿದೆ.
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಶೇ. 66. 45, ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ- ಶೇ.67.62, ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ಶೇ. 68.74, ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ- ಶೇ.77.44 ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನ ಯಲಬುರ್ಗಾ ಪ.ಪಂ. ವ್ಯಾಪ್ತಿಯಲ್ಲಿ ಆಗಿದ್ದರೆ, ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಅತಿ ಕಡಿಮೆ ಮತದಾನವಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಪ್ರಾರಂಭಗೊಂಡ ಮತದಾನ, ಆರಂಭದಲ್ಲಿ ಮಂದಗತಿಯಿಂದ ಪ್ರಾರಂಭವಾದರೂ, ನಂತರದಲ್ಲಿ ವೇಗವನ್ನು ಪಡೆದುಕೊಂಡಿತು. ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣದಿಂದ, ಬೀಸುತ್ತಿದ್ದ ತಂಗಾಳಿ, ಮತದಾರರ ಮತದಾನದ ಉತ್ಸಾಹಕ್ಕೆ ಉತ್ತೇಜನ ನೀಡುವಂತಿತ್ತು.

ಆಗೊಮ್ಮೆ, ಈಗೊಮ್ಮೆ ಸೂರ್ಯ ಇಣುಕಿ ನೋಡುತ್ತಿದ್ದರಿಂದ, ಜಿಲ್ಲೆಯಲ್ಲಿ ಹವಾಗುಣ ಮತದಾನಕ್ಕೆ ಆಹ್ಲಾದಕರ ವಾತಾವರಣ ಸೃಷ್ಟಿಸಿತ್ತು. ಮತದಾರರು ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುವ ದೃಶ್ಯ ಜಿಲ್ಲೆಯ ಹಲವು ಮತಗಟ್ಟೆಗಳಲ್ಲಿ ಸಾಮಾನ್ಯವಾಗಿತ್ತು. 



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ