ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಇಂದು ಪದಗ್ರಹಣ ಮಾಡಲಿದ್ದಾರೆ. ಆದರೆ, ಪದಗ್ರಹಣದ ಮೊದಲ ದಿನವೇ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ವಿಜಯೇಂದ್ರ ನೇಮಕದಿಂದ ಅಸಮಾಧಾನಗೊಂಡಿರುವ ಹಲವು ಹಿರಿಯ ನಾಯಕರು ಪದಗ್ರಹಣ ಸಮಾರಂಭಕ್ಕೆ ಗೈರುಹಾಜರಾಗಿದ್ದಾರೆ.
ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಸುನೀಲ್ ಕುಮಾರ್, ಮಾಜಿ ಸಚಿವರಾದ ಸಿ.ಟಿ.ರವಿ. ವಿ.ಸೋಮಣ್ಣ, ಅರವಿಂದ ಲಿಂಬಾವಳಿ ಗೈರು ಹಾಜರಾಗಿದ್ದಾರೆ. ಇವರಲ್ಲಿ ಸಿ,ಟಿ.ರವಿ.ವಿ.ಸೋಮಣ್ಣ ಮತ್ತ ಅರವಿಂದ ಲಿಂಬಾವಳಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು.
ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ತೀವ್ರ ಲಾಭಿ ನಡೆಸುತ್ತಿದ್ದರು. ಅಚ್ಚರಿ ಎಂದರೆ, ಯಡಿಯೂರಪ್ಪನವರ ಆಪರೇಷನ್ ಕಮಲದ ಮೂಲಕವೇ ಬಿಜೆಪಿಗೆ ಬಂದಿದ್ದ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್ ಕೂಡ ಗೈರು ಹಾಜರಾಗಿದ್ದಾರೆ. ಎಸ್.ಟಿ.ಸೋಮಶೇಖರ್ ಬಿಜೆಪಿ ವರಿಷ್ಟರ ವಿರುದ್ದ ಅಸಮಾಧಾನಗೊಂಡಿದ್ದು, ಕಾಂಗ್ರೆಸ್ ಗೆ ವಲಸೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಿರಿಯ ನಾಯಕರ ಅಸಮಾಧಾನ, ಮುಂದೆ ಬಂಡಾಯವಾಗಿ ಪರಿವರ್ತನೆಯಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.