ಬೆಂಗಳೂರು: ಕಳೆದ ನಾಲ್ಕು ದಿನಗಳ ಹಿಂದೆ ನಡೆದ 15 ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ನಡೆದ ಎಸಿಬಿ ದಾಳಿ ಸಂಬಂಧ ಅಕ್ರಮ ಆಸ್ತಿ ಬಗೆದಷ್ಟು ಬಯಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ವಾಸುದೇವ ಒಟ್ಟು ಆಸ್ತಿ 29.15 ಕೋಟಿ ರೂ. ಇದ್ದು, ಅಕ್ರಮ ಆಸ್ತಿ ಪ್ರಮಾಣ ಶೇ. 1408 ರಷ್ಟು ಹೆಚ್ಚಿದೆ ಎಂದು ಎಸಿಬಿ ಬಹಿರಂಗಪಡಿಸಿದೆ.
ವಾಸುದೇವ ಎಂಬುವವರ ಸ್ಥಿರಾಸ್ತಿ 26.78 ಕೋಟಿ ರೂ., ಚರಾಸ್ತಿ 3.87 ಕೋಟಿ ರೂ. ಸಿಕ್ಕಿದೆ. ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ 19 ನಿವೇಶನ, 3 ಮನೆಗಳನ್ನು ಹೊಂದಿರುವುದು ಎಸಿಬಿ ದಾಳಿಯಿಂದ ಬಯಲಾಗಿದೆ.
ರುದ್ರೇಶಪ್ಪನವರಿಗೆ ಡಿ. 7ರ ತನಕ ನ್ಯಾಯಾಂಗ ಬಂಧನ:
ಎಸಿಬಿ ದಾಳಿಗೆ ಒಳಗಾಗಿದ್ದ ಗದಗ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪನವರಿಗೆ ಡಿ. 7ರ ತನಕ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ದಾಳಿಯ ವೇಳೆ ರುದ್ರೇಶಪ್ಪನವರ ಚಾಲುಕ್ಯ ನಗರದ ಮನೆಯಲ್ಲಿ 9.5 ಕೆ.ಜಿ ಬಂಗಾರ, 3 ಕೆ.ಜಿ ಬೆಳ್ಳಿ, 15 ಲಕ್ಷ ರೂ ಹಣ, 4 ಸೈಟು, 2 ಕಾರು, ಎರಡು ಮನೆಗಳು ಇರುವುದು ಪತ್ತೆಯಾಗಿತ್ತು.
ಜೈಲು ವಾರ್ಡ್ ನಲ್ಲಿ ಚಿಕಿತ್ಸೆ:
ಜೇವರ್ಗಿ ಪಿಡಬ್ಲ್ಯೂಡಿ ಕಿರಿಯ ಇಂಜಿನಿಯರ್ ಶಾಂತಗೌಡ ಬಿರಾದಾರನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದ ಬೆನ್ನಲ್ಲೇ, ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಜಿಮ್ಸ್ ಆಸ್ಪತ್ರೆಯ ಜೈಲು ವಾರ್ಡ್ಗೆ ರವಾನೆ ಮಾಡಲಾಗಿದೆ.