ಮಡಿಕೇರಿ: ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯ ರುಂಡ ಕತ್ತರಿಸಿದ ಹಂತಕ ಪ್ರಕಾಶ್ ಆತ್ಮಹತ್ಯೆ ವದಂತಿಗಳಿಗೆ ಬ್ರೇಕ್ ಬಿದ್ದಿದ್ದು, ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಸೂರ್ಲಬ್ಬಿ ಗ್ರಾಮದ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿ ಮೀನಾ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಳು. ಆದರೆ ಆಕೆಯ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. ಅದೇ ದಿನ ಆಕೆಗೆ ನಿಶ್ಚಿತಾರ್ಥವೂ ನಿಗದಿಯಾಗಿತ್ತು. ಅದರಂತೆ ಆಕೆಯ ಪ್ರಿಯಕರ ಪ್ರಕಾಶ್ ಜೊತೆ ನಿಶ್ಚಿತಾರ್ಥ ಮಾಡುತ್ತಿದ್ದಾಗ ಅಪ್ರಾಪ್ತೆಗೆ ಮದುವೆ ಮಾಡಿಸುತ್ತಿದ್ದಾರೆ ಎಂದು ಯಾರೋ ದೂರು ನೀಡಿದ್ದರಿಂದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮದುವೆ ಮಾಡದಂತೆ ಮುಚ್ಚಳಿಕೆ ಬರೆಸಿಕೊಂಡಿದ್ದರು.
ಅದರಂತೆ ಆರೋಪಿ ಪ್ರಕಾಶ್ ಕೂಡಾ ಒಪ್ಪಿಕೊಂಡು ಹೋಗಿದ್ದ. ಆದರೆ ನಂತರ ಮನೆಗೆ ಬಂದು ಗಲಾಟೆ ಮಾಡಿದ್ದ. ಬಾಲಕಿ ಮೀನಾ ಪೋಷಕರು 18 ವರ್ಷವಾಗದಂತೆ ಮದುವೆ ಮಾಡಿಸುವುದಿಲ್ಲ ಎಂದು ಹಠ ಹಿಡಿದಿದ್ದರು. ಹೀಗಾಗಿ ಸಿಟ್ಟಿಗೆದ್ದ ಪ್ರಕಾಶ್ ಮೀನಾ ತಾಯಿಯ ಕೈ ಕತ್ತರಿಸಿ ಹಲ್ಲೆ ನಡೆಸಿದ್ದಾನೆ. ಬಳಿಕ ಮೀನಾಳನ್ನು ಮನೆಯಿಂದ 300 ಮೀ. ದೂದ ಎಳೆದೊಯ್ದು ರುಂಡ ಕತ್ತರಿಸಿ ಪರಾರಿಯಾಗಿದ್ದಾನೆ.
ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸುದ್ದಿ ಹಬ್ಬಿತ್ತು. ಆದರೆ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಆತ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಸೋಮಾರಪೇಟೆಯ ಗ್ರಾಮವೊಂದರಲ್ಲಿ ಅಡಗಿ ಕುಳಿತಿದ್ದ ಆತನನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ.
ಸೊರ್ಲಬ್ಬಿ ಎಂಬ ಕುಗ್ರಾಮದಲ್ಲಿ ಎಸ್ಎಸ್ಎಲ್ ಸಿ ಓದುತ್ತಿದ್ದ ಏಕೈಕ ವಿದ್ಯಾರ್ಥಿನಿ ಮೀನಾ ಆಗಿದ್ದಳು. ಓದಿನಲ್ಲಿ ಮಾತ್ರವಲ್ಲ, ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದಳು. ಇಷ್ಟು ಚಿಕ್ಕವಯಸ್ಸಿನಲ್ಲೇ ಆಕೆ 33 ವರ್ಷದ ಪ್ರಕಾಶ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ಇವರಿಬ್ಬರ ಸಂಬಂಧ ಇಡೀ ಊರಿಗೇ ಗೊತ್ತಿತ್ತು. ಆಕೆಯ ಒಪ್ಪಿಗೆಯಿಂದಲೇ ನಿಶ್ಚಿತಾರ್ಥವೂ ನಡೆದಿತ್ತು. ಇದೀಗ ಆಕೆಯ ಜೀವನವೇ ಕೊನೆಯಾಗಿದೆ.