ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ಅಖಂಡ ಶ್ರೀನಿವಾಸಮೂರ್ತಿ ರಾಜೀನಾಮೆ

ಸೋಮವಾರ, 17 ಏಪ್ರಿಲ್ 2023 (16:46 IST)
ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
 
ಭಾನುವಾರ ಶಿರಸಿಗೆ ತೆರಳಿದ ಅವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
 
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಮೂರು ಪಟ್ಟಿಯಲ್ಲಿಯೂ ನನಗೆ ಟಿಕೆಟ್ ನೀಡಿಲ್ಲ. ಸಾಕಷ್ಟು ನೋವು ತಿಂದಿದ್ದೇನೆ. ಇದರಿಂದ ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಬಂದಿದ್ದೇನೆ ಎಂದು  ಹೇಳಿದರು.
 
ಪಕ್ಷ ನನಗೆ ಇದುವರೆಗೂ ಟಿಕಟ್ ನೀಡಿಲ್ಲ ಎಂದರೆ ಅರ್ಥ ಮಾಡಕೊಳ್ಳಬೇಕು. ಕ್ಷೇತ್ರದ ಜನ ದಿನವೂ ಏನಾಯ್ತು ಎಂದು ಪ್ರಶ್ನೆ ಮಾಡುತ್ತಾರೆ. ನನ್ನ ಕ್ಷೇತ್ರದಲ್ಲಿ ಹಿಂದೂ-ಮುಸ್ಲಿಂ-ಕಿಶ್ಚಿಯನ್ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಅದು ನಾನು ಹುಟ್ಟಿ ಬೆಳೆದ ಸ್ಥಳ. ನಾವೆಲ್ಲರೂ ಜೊತೆಗಿದ್ದೇವೆ. ಯಾರದೋ ಮಾತುಕೇಳಿ ನನಗೆ ಈ ರೀತಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
 
ಕೆಲವು ಹಿರಿಯ ನಾಯಕರು ನನಗೆ ಟಿಕೆಟ್ ನೀಡಬಾರದು ಎಂದು ತೀರ್ಮಾನ ಮಾಡಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಯಾರದೋ ತಪ್ಪಿಗೆ ನನ್ನ ಮನೆ ಸುಟ್ಟುಕೊಂಡಿದ್ದೇನೆ. ನನಗೆ ಈ ರೀತಿ ನೋವು ಕೊಡಲಾಗುತ್ತದೆ. ನನ್ನ ಕ್ಷೇತ್ರದಲ್ಲಿ ಎಲ್ಲರೂ ಅಣ್ಣತಮ್ಮಂದರಂತೆ ಇದ್ದೇವೆ. ಆದರೆ, ಕ್ಷೇತ್ರದ ಹೊರಗಿನವರ ಹೇಳಿಕೆ ಪರಿಗಣಿಸಿ ನನಗೆ ಟಿಕೆಟ್ ನೀಡುತ್ತಿಲ್ಲ ಎಂದರು. 
 
ನಾನು ಬೇರೆ ಯಾವುದೇ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿಲ್ಲ. ಕ್ಷೇತ್ರದಲ್ಲಿ ನಮ್ಮ ಲೀಡರ್‌ಗಳ ಜೊತೆ ಚರ್ಚಿಸಿ ರಾಜೀನಾಮೆ ತೀರ್ಮಾನ ಮಾಡಿದ್ದೇನೆ. ಸದ್ಯ ಪಕ್ಷೇತರವಾಗಿ ಸ್ಪರ್ಧಿಸುವ ತೀರ್ಮಾನ ಮಾಡಿದ್ದೇನೆ. ಕ್ಷೇತದ ಮುಖಂಡರು ಕಾರ್ಯಕರ್ತರೊಂದಿಗೆ ಚರ್ಚಸಿ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ