ಬೆಂಗಳೂರು ದಿನೇದಿನೇ ಬೆಳೆಯುತ್ತಿದ್ದು,ಜನದಟ್ಟಣೆ ಹೆಚ್ಚಾಗ್ತಾ ಇದೆ ಮತ್ತು 110 ಹಳ್ಳಿಗಳನ್ನು ಬೆಂಗಳೂರು ವ್ಯಾಪ್ತಿಗೆ ಸೇರಿಸಿಕೊಂಡಿದ್ದೇವೆ. ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ 8 ಮುನ್ಸಿಪಾಲಿಟಿಗಳನ್ನು ಸೇರಿಸಿಕೊಳ್ಳಲಾಗಿತ್ತು. ನಗರ ಪ್ರದೇಶದ ಜೊತೆಗೆ ಹಳ್ಳಿಗಳಲ್ಲಿಯೂ ಮೂಲಸೌಕರ್ಯ ಕಲ್ಪಿಸುವ ಸವಾಲು ಇದೆ;ಅಲ್ಲಿಯೂ ಸೌಕರ್ಯ ಒದಗಿಸಲಾಗುವುದು ಎಂದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 18,52,802 ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ವಿವಿಧ ರೀತಿಯ ಉಪಯೋಗದ ಕಟ್ಟಡಗಳನ್ನ ವಿವಿಧ ವರ್ಗಗಳಾಗಿ ವಿಂಗಡಿಸಲಾಗಿದ್ದು,ಪ್ರತಿಯೊಂದು ವರ್ಗಕ್ಕೂ ಪ್ರತ್ಯೇಕ ದರಗಳಲ್ಲಿ ಆಸ್ತಿ ತೆರಿಗೆ ನಿಗದಿಪಡಿಸಲಾಗಿದೆ. ವಾಣಿಜ್ಯ ಕಟ್ಟಡಗಳಿಗೆ ಯೂನಿಟ್ ಏರಿಯಾ ವ್ಯಾಲ್ಯೂ ಮೌಲ್ಯದ ಶೇ.25ರಷ್ಟು ತೆರಿಗೆ ಹಾಗೂ ವಸತಿ ಕಟ್ಟಡಗಳಿಗೆ ಶೇ.20ರಷ್ಟು ತೆರಿಗೆ ವಿಧಿಸಲಾಗುತ್ತಿದೆ ಎಂದು ಅವರು ವಿವರಿಸಿದರು.