ಫೆ. 5, 6 , 7 ರಂದು ಅಖಿಲ ಭಾರತ 85 ನೇ ಕನ್ನಡ ಸಾಹಿತ್ಯ ಸಮ್ಮೇಳನ

ಬುಧವಾರ, 13 ನವೆಂಬರ್ 2019 (15:31 IST)
ಅಖಿಲ ಭಾರತ  85ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2020 ರ ಫೆಬ್ರವರಿ 5, 6, ಮತ್ತು 7 ರಂದು ನಡೆಸಲಾಗುತ್ತಿದೆ.

ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಧಾನ ಕ್ರೀಡಾಂಗಣದಲ್ಲಿ ಸಮ್ಮೇಳನ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ  ಘೋಷಿಸಿದ್ರು.

ಉಪಮುಖ್ಯಮಂತ್ರಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರೊಂದಿಗೆ ಚರ್ಚಿಸಿದಾಗ ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ತೊಂದರೆಯಾಗದಂತೆ ಹಾಗೂ ವಿಶ್ವವಿದ್ಯಾಲಯದ ಮಕ್ಕಳ ಪರೀಕ್ಷೆಗಳಿಗೆ ತೊಂದರೆಯಾಗದಂತೆ ಪರಿಶೀಲಿಸಿ ಸ್ಥಳ ಹಾಗೂ ದಿನಾಂಕ ನಿಗದಿಪಡಿಸಲು ತಿಳಿಸಿದ್ದಾರೆ. 2020 ರ ಫೆಬ್ರವರಿ ಮೊದಲನೇ ವಾರದಲ್ಲಿ ಈ ಸಮ್ಮೇಳನವನ್ನು ಏರ್ಪಡಿಸಲಾಗುವುದು ಎಂದ್ರು.

ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಧಾನ ಕ್ರೀಡಾಂಗಣದಲ್ಲಿ ಪ್ರಧಾನ ವೇದಿಕೆ ನಿರ್ಮಿಸಲಾಗುವುದು. ಇಲ್ಲಿ 50-60 ಸಾವಿರ ಜನರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುವುದು.  ಡಾ. ಬಿ.ಆರ್. ಅಂಬೇಡ್ಕರ್ ಭವನ ಹಾಗೂ  ಕಾರ್ಯಸೌಧದ ಮಹತ್ಮಾಗಾಂಧಿ  ಸಭಾಂಗಣಗಳಲ್ಲಿ ಗೋಷ್ಠಿಗಳನ್ನು ಏರ್ಪಡಿಸಲಾಗುವುದು. ಜನಸಾಮಾನ್ಯರು ಹಾಗೂ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಮೂರು ದಿನಗಳ ಕಾಲ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಅಖಿಲ ಭಾರತ  85ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಅಂದಾಜು 10 ರಿಂದ 12 ಕೋಟಿ ರೂ. ವೆಚ್ಚವಾಗಲಿದ್ದು, ಈ ಎಲ್ಲಾ ಅನುದಾನವು ಸರ್ಕಾರ ಭರಿಸಲಿದೆ ಎಂದರು. ಸಮ್ಮೇಳನ ಅಧ್ಯಕ್ಷರ ಆಯ್ಕೆಯನ್ನು ಮುಂದಿನ ದಿನಗಳಲ್ಲಿ ಕಾರ್ಯಕಾರಿ ಸಮಿತಿ ಸಭೆ ಕರೆದು   ಅಧ್ಯಕ್ಷರ ಆಯ್ಕೆಯನ್ನು ಅಂತಿಮಗೊಳಿಸಲಾಗುವುದು ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ