ದಲಿತರ ಕಲ್ಯಾಣಕ್ಕಾಗಿ ಮೀಸಲಿಡುವ ಎಸ್ ಸಿ ಪಿಟಿಎಸ್ ಪಿ ಯೋಜನೆಗೆ ಮೀಸಲಿಟ್ಟಿರುವ ಅನುದಾನದ ಹಂಚಿಕೆ ವಿಚಾರ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ನಡುವೆ ಟಾಕ್ ವಾರ್ ಗೆ ಎಡೆ ಮಾಡಿಕೊಟ್ಟಿದೆ. ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಪಿಟಿಎಸ್ ಪಿ ಯೋಜನೆಗಳ ಹಣ ಬಳಕೆ ಮಾಡುವುದನ್ನು ಬಿಜೆಪಿ ವಿರೋಧಿಸಿದ್ರೆ, ಕಾಂಗ್ರೆಸ್ ಯೋಜನೆ ದುರ್ಬಳಕೆ ಆಗಿಲ್ಲ ಎಂದು ಹೇಳಿಕೊಂಡಿದೆ.
ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಅನುದಾನಕ್ಕಾಗಿ ದಲಿತರ ಕಲ್ಯಾಣಕ್ಕಾಗಿ ಮೀಸಲಿರಿಸಿದ್ದ ಎಸ್ ಸಿಪಿಟಿಎಸ್ ಪಿ ಯೋಜನೆಯ 11,ಸಾವಿರಕೋಟಿ ರೂಪಾಯಿಗಳ ಹಣವನ್ನು ರಾಜ್ಯ ಸರ್ಕಾರ ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಸರ್ಕಾರದ ಈ ನಡೆಯನ್ನು ವಿರೋಧ ಪಕ್ಷ ಬಿಜೆಪಿ ಬಲವಾಗಿ ಖಂಡಿಸಿದೆ. ಬಿಜೆಪಿ ರಾಜ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಸಿದ್ದರಾಮಯ್ಯ ಸರ್ಕಾರದ ದಲಿತ ವಿರೋಧಿ ನಿಲುವನ್ನು ಮಾಜಿ ಉಪಮುಖ್ಯ ಗೋವಿಂದ ಕಾರಜೋಳ ವಿರೋಧಿಸಿ, ಸಮರ್ಪಕ ಬಳಕೆಗೆ ಒತ್ತಾಯಿಸಿದ್ರು.
ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಗೋವಿಂದ ಕಾರಜೋಳ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡ್ತಿದೆ. ಹಾಸ್ಟೆಲ್, ವಸತಿ ಶಾಲೆಗಳಿಗೆ ಈ ಯೋಜನೆಯಡಿ ಸರ್ಕಾರ ಹಣ ಇಟ್ಟಿಲ್ಲ. ಬಹಳಷ್ಟು ಕಡೆ ವಸತಿ ಶಾಲೆಗಳು, ಹಾಸ್ಟೆಲ್‌ಗಳ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಇವುಗಳಿಗೆ ಹಣ ಕೊಡುವುದನ್ನು ಬಿಟ್ಟು ಗ್ಯಾರಂಟಿಗಳಿಗೆ ಹಣ ಮೀಸಲಿಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ರು. ಸರ್ಕಾರದ ಈ ಕ್ರಮ ಸರಿ ಇಲ್ಲ. ಕಾಮನ್ ಪ್ರೋಗ್ರಾಂ ಆಗಿ ಘೋಷಿಸಿರುವ ಯೋಜನೆಗಳಿಗೆ ದಲಿತರ ಮೀಸಲು ಹಣ ಬಳಕೆ ಸಮರ್ಪಕವಲ್ಲ ಎಂದು ಕಾರಜೋಳ ಹೇಳಿದ್ರು. ಇದೇ ವೇಳೆ ಸಚಿವ ಎಚ್ ಸಿ ಮಹಾದೇವಪ್ಪ ಅವರನ್ನು ಆಗ್ರಹಿಸಿದ ಕಾರಜೋಳ, ಹೋರಾಟಗಾರರಾದ ತಾವು ಸಿಎಂ ಒತ್ತಾಯಕ್ಕೆ ಮಣಿದು ಎಸ್ಸಿ, ಎಸ್ಟಿ ಹಣ ಬೇರೆ ಉದ್ದೇಶಕ್ಕೆ ಬಳಸೋದನ್ನು ಒಪ್ಪಿಕೊಳ್ಳಬಾರದು ಎಂದ್ರು.