ಸಂಸ್ಕೃತದಲ್ಲಿ ಅಲೋಕ್ಕುಮಾರ್ ಮಾತು
ಸಾರ್ವಕರ್ ಫ್ಲೆಕ್ಸ್ ವಿಚಾರದಲ್ಲಿ ಶಿವಮೊಗ್ಗದಲ್ಲಿ ಉಂಟಾಗಿದ್ದ ಗಲಭೆ ಸಂಬಂಧ ಎಡಿಜಿಪಿ ಅಲೋಕ್ ಕುಮಾರ್ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಸಂಸ್ಕೃತ ಗ್ರಾಮ ಮತ್ತೂರಿಗೂ ಭೇಟಿ ನೀಡಿದ್ದಾರೆ. ಇಲ್ಲಿನ ಗ್ರಾಮಸ್ಥರ ಜೊತೆ ಸಂಸ್ಕೃತದಲ್ಲಿಯೇ ಮಾತನಾಡಿದ್ದು, ಆ ವಿಡಿಯೋವನ್ನು ಅಲೋಕ್ ಕುಮಾರ್ ಅವರು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಶಿವಮೊಗ್ಗ ನಗರದಿಂದ 10 ಕಿ.ಮೀ. ದೂರವಿರುವ ಮತ್ತೂರು ಗ್ರಾಮಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ. ಗ್ರಾಮದಲ್ಲಿ ಸಿಕ್ಕವರ ಜೊತೆ ಸಂಸ್ಕೃತದಲ್ಲಿಯೇ ಮಾತನಾಡಿದ್ದಾರೆ. ಇದು ಒಂದು ರೀತಿ ಸಹಜ ಸಂಭಾಷಣೆ ಎಂಬುವಂತೆ ಇದೆ.ಈ ವಿಚಾರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 'ಸಂಸ್ಕೃತ ಒಂದು ಶಾಸ್ತ್ರೀಯ ಭಾಷೆ, ಅದರ ದನಿಯೇ ಕಿವಿಗೆ ಸಂಗೀತವಿದ್ದಂತೆ, ಈ ನಿಟ್ಟಿನಲ್ಲಿ ಮತ್ತೂರಿಗೆ ಭೇಟಿ ನೀಡಿ ಅಲ್ಲಿನವರ ಜೊತೆ ಒಂದಿಷ್ಟು ಮಾತುಕತೆ ನಡೆಸಿದೆ. ಎಲ್ಲ ಶಾಸ್ತ್ರೀಯ ಭಾಷೆಗಳನ್ನು ರಕ್ಷಿಸುವ ಹಾಗೂ ಪ್ರೋತ್ಸಾಹಿಸುವ ಅಗತ್ಯತೆ ಇದೆ' ಎಂದು ಅಲೊಕ್ ಕುಮಾರ್ ಬರೆದುಕೊಂಡಿದ್ದಾರೆ.