ಅಮರನಾಥ ಯಾತ್ರೆ ಪುನರಾರಂಭ

ಸೋಮವಾರ, 11 ಜುಲೈ 2022 (20:46 IST)
ಜಮ್ಮುವಿನ ಭಗವತಿ ನಗರದಲ್ಲಿರುವ ಯಾತ್ರಿ ನಿವಾಸ ಬೇಸ್ ಕ್ಯಾಂಪ್ ನಿಂದ ಅಮರನಾಥ ಯಾತ್ರೆ ಪುನರಾರಂಭಗೊಂಡಿದೆ. ಶುಕ್ರವಾರ ಸಂಜೆ ಅಮರನಾಥ ಗುಹೆ ಬಳಿ ಭಾರೀ ವರ್ಷಧಾರೆಯಿಂದಾಗಿ ತಾತ್ಕಾಲಿಕವಾಗಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಮಳೆ ಆರ್ಭಟದಿಂದಾಗಿ ಉಂಟಾದ ಪ್ರವಾಹದಿಂದ 16 ಜನರು ಸಾವಿಗೀಡಾಗಿದ್ದರು. ಇದೇ ಸಂದರ್ಭದಲ್ಲಿ 40 ಮಂದಿ ಕಾಣೆಯಾಗಿದ್ದು, ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ಅಮರನಾಥದಲ್ಲಿ ಈ ಅನಾಹುತ ಸಂಭವಿಸಿದ್ದರೂ ಯಾತ್ರಾರ್ಥಿಗಳ ಉತ್ಸಾಹ ಸ್ವಲ್ಪವೂ ಕಡಿಮೆಯಾಗಿಲ್ಲ.' ಬಂ ಬಂ ಭೋಲೆ' ಎಂಬ ಘೋಷಣೆಗಳೊಂದಿಗೆ ಭಕ್ತರಿಗಾಗಿ ಸರ್ಕಾರ ಸ್ಥಾಪಿಸಿರುವ ಬೇಸ್ ಕ್ಯಾಂಪ್​​​​ಗಳತ್ತ ದಾಪುಗಾಲು ಹಾಕುತ್ತಿದ್ದಾರೆ. 4,026 ಯಾತ್ರಾರ್ಥಿಗಳ 12ನೇ ಬ್ಯಾಚ್ 110 ವಾಹನಗಳ ಬೆಂಗಾವಲಿನೊಂದಿಗೆ ಶಿಬಿರದಿಂದ ರವಾನೆಯಾಗಿದ್ದಾರೆ. ಇನ್ನು 767 ಪುರುಷರು, 240 ಮಹಿಳೆಯರು ಮತ್ತು ಒಂಬತ್ತು ಮಕ್ಕಳು ಸೇರಿದಂತೆ ಒಟ್ಟು 1,016 ಪ್ರಯಾಣಿಕರು ಬೇಸ್ ಕ್ಯಾಂಪ್ ನಿಂದ 25 ಬಸ್ ಗಳು ಮತ್ತು 10 ಲಘು ಮೋಟಾರು ವಾಹನಗಳಲ್ಲಿ ಬಾಲ್ಟಾಲ್ ಮಾರ್ಗಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ