ಬೆಂಗಳೂರು: ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಹೊರಟಿರುವ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪಗೆ ದೆಹಲಿಗೆ ಬರುವಂತೆ ಗೃಹ ಸಚಿವ ಅಮಿತ್ ಶಾ ಬುಲಾವ್ ನೀಡಿದ್ದಾರೆ.
ಬೆಂಗಳೂರಿಗೆ ಭೇಟಿ ನೀಡಿರುವ ಅಮಿತ್ ಶಾ ಇಂದು ಗ್ರಾಮಾಂತರ ಪ್ರದೇಶದಲ್ಲಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಜೊತೆಗೆ ರಾಜ್ಯ ನಾಯಕರ ಬಂಡಾಯ ಶಮನಕ್ಕೂ ಮುಂದಾಗಿದ್ದಾರೆ. ರೇಣುಕಾಚಾರ್ಯ ಮತ್ತು ಬಳಗದ ಜೊತೆಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ.
ಇದರ ನಡುವೆ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಯಾರು ಏನೇ ಹೇಳಿದರೂ ನಾನು ಸೊಪ್ಪು ಹಾಕಲ್ಲ. ಶಿವಮೊಗ್ಗದಿಂದ ಸ್ಪರ್ಧಿಸಿಯೇ ಸಿದ್ಧ ಎನ್ನುತ್ತಿರುವ ಈಶ್ವರಪ್ಪಗೆ ಅಮಿತ್ ಶಾ ಕರೆ ಮಾಡಿ ದೆಹಲಿಗೆ ಬರಲು ಸೂಚನೆ ನೀಡಿದ್ದಾರೆ.
ಇದನ್ನು ಸ್ವತಃ ಈಶ್ವರಪ್ಪನವರೇ ಖಾತ್ರಿಗೊಳಿಸಿದ್ದಾರೆ. ಅಮಿತ್ ಶಾ ದೆಹಲಿಗೆ ಬರಲು ಕರೆ ಮಾಡಿರುವುದು ನಿಜ. ನಾನು ದೆಹಲಿಗೆ ಹೋಗುತ್ತೇನೆ. ಆದರೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಈಶ‍್ವರಪ್ಪ ಸ್ಪಷ್ಟಪಡಿಸಿದ್ದಾರೆ.