ಆಂದೋಲಾ ಸ್ವಾಮೀಜಿ ಬಂಧನ ಖಂಡಿಸಿ ಪ್ರತಿಭಟನೆ: ಮುತಾಲಿಕ್ ವಶಕ್ಕೆ
ಗುರುವಾರ, 2 ನವೆಂಬರ್ 2017 (16:24 IST)
ಕಲಬುರ್ಗಿ: ಶ್ರೀರಾಮಸೇನೆ ರಾಜ್ಯ ಗೌರವಾಧ್ಯಕ್ಷ ಆಂದೋಲಾ ಕರುಣೇಶ್ವರ ಮಠದ ಸಿದ್ದಲಿಂಗಸ್ವಾಮಿಜಿ ಬಂಧನ ಖಂಡಿಸಿ ಶ್ರೀರಾಮಸೇನಾ ಅಧಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹಲವು ಮಠಾಧೀಶರು, ಕಾರ್ಯಕರ್ತರು ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆಂದೋಲಾ ಶ್ರೀಗಳ ಬಂಧಿಸುವ ಮೂಲಕ ಹಿಂದುತ್ವ ಧಮನ ಮಾಡಲು ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಜೇವರ್ಗಿ ಶಾಸಕ ಅಜಯಸಿಂಗ್ ಹುನ್ನಾರ ನಡೆಸಿದ್ದಾರೆ. ಅವರ ಕುಮ್ಮಕ್ಕಿನಿಂದ ಆಂದೋಲಾ ಶ್ರೀಗಳನ್ನು ಬಂಧಿಸಲಾಗಿದೆ ಎಂದು ಮುತಾಲಿಕ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ತಕ್ಷಣ ಆಂದೋಲಾ ಶ್ರೀಗಳನ್ನು ಬಿಡುಗಡೆ ಮಾಡಿ ಕ್ಷಮೆಯಾಚಿಸಬೇಕು. ಇಲ್ಲದಿದ್ರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದರು. ಪ್ರತಿಭಟನೆ ಬಳಿಕ ಕನ್ನಡ ಭವನದಲ್ಲಿ ಕಾರ್ಯಕರ್ತರೊಂದಿಗೆ ಚರ್ಚಿಸುತ್ತಿದ್ದಾಗ ಪ್ರಮೋದ್ ಮುತಾಲಿಕ್ ರನ್ನು ಕಲಬುರ್ಗಿ ಪೊಲೀಸರು ವಶಕ್ಕೆ ಪಡೆದಿದ್ದು, ಬೇರೆಡೆ ಅವರನ್ನು ಕರೆದೊಯ್ದು ವಿಚಾರಣೆ ನಡೆಸಲಾಗ್ತಿದೆ ಎನ್ನಲಾಗಿದೆ.
ಘಟನೆಯಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡಿದ್ದು, ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ ಶಶಿಕುಮಾರ್, ಮುತಾಲಿಕ್ ಬಂಧನ ಮಾಡಿಲ್ಲ. ಮುತಾಲಿಕ್ ಅವರ ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿಚಾರಣೆಗಾಗಿ ಕರೆತರಲಾಗಿದೆ ಎಂದು ತಿಳಿಸಿದರು.